ಅಪಾರ್ಟ್‌ಮೆಂಟಿನ ಈಜುಕೊಳಕ್ಕೆಬಿದ್ದು 10 ವರ್ಷದ ಬಾಲಕಿ ಸಾವು

| Published : Dec 30 2023, 01:15 AM IST

ಸಾರಾಂಶ

ಆಟ ಆಡುವಾಗ ಪ್ರೆಸ್ಟೀಜ್‌ ಲೇಕ್‌ಸೈಡ್‌ ಹ್ಯಾಬಿಟೆಟ್‌ ಅಪಾರ್ಟ್‌ಮೆಂಟ್‌ನ ಈಜು ಕೊಳಕ್ಕೆ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಪಾರ್ಟ್‌ಮೆಂಟ್‌ನ ಈಜುಕೊಳಕ್ಕೆ ಬಿದ್ದು 10 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ವರ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವರ್ತೂರಿನ ಪ್ರೆಸ್ಟೀಜ್‌ ಲೇಕ್‌ಸೈಡ್‌ ಹ್ಯಾಬಿಟೆಟ್‌ ಅಪಾರ್ಟ್‌ಮೆಂಟ್‌ ನಿವಾಸಿ ರಾಜೇಶ್‌ ದಮೇರ್ಲಾ ಅವರ ಪುತ್ರಿ ಮಾನ್ಯಾ(10) ಮೃತ ಬಾಲಕಿ. ಗುರುವಾರ ರಾತ್ರಿ 7.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಆಂಧ್ರಪ್ರದೇಶದ ವಿಜಯವಾಡ ಮೂಲದ ರಾಜೇಶ್‌ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ. ಪತ್ನಿ ಮತ್ತು ಮಗಳೊಂದಿಗೆ ವರ್ತೂರಿನ ಪ್ರೆಸ್ಟೀಜ್‌ ಲೇಕ್‌ಸೈಡ್‌ ಹ್ಯಾಬಿಟೆಟ್‌ ಅಪಾರ್ಟ್‌ಮೆಂಟ್‌ನ 17ನೇ ಟವರ್‌ನ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಮೃತ ಮಾನ್ಯ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಆಟವಾಡುವಾಗ ಈಜುಕೊಳಕ್ಕೆ ಬಿದ್ದು ಸಾವು:

ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಮಾನ್ಯ ಹಾಗೂ ಇತರೆ ಮಕ್ಕಳು ಅಪಾರ್ಟ್‌ಮೆಂಟ್‌ನ ಟವರ್‌-20ರ ಬಳಿ ಇರುವ ಈಜುಕೊಳದ ಬಳಿ ಆಟವಾಡುತ್ತಿದ್ದರು. ಈ ವೇಳೆ ಮಾನ್ಯ ಈಜುಕೊಳಕ್ಕೆ ಬಿದ್ದಿದ್ದಾಳೆ. ಇದನ್ನು ನೋಡಿದ ಅಪಾರ್ಟ್‌ಮೆಂಟಿನ ನಿವಾಸಿಗಳು ತಕ್ಷಣ ಮಾನ್ಯಗಳನ್ನು ಈಜುಕೊಳದಿಂದ ಮೇಲಕ್ಕೆ ಎತ್ತಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಾನ್ಯ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿದ್ದಾರೆ.

ಕರೆಂಟ್‌ ಶಾಕ್‌ನಿಂದ ಸಾವು ಶಂಕೆ

ಪುತ್ರಿ ಮಾನ್ಯಳ ಸಾವಿನ ಬಗ್ಗೆ ತಂದೆ ರಾಜೇಶ್‌ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈಜುಕೊಳದ ಸಮೀಪದ ವಿದ್ಯುತ್‌ ತಂತಿ ಬಿದ್ದಿದ್ದು, ಆಟವಾಡುವಾಗ ಮಾನ್ಯ ಆ ವಿದ್ಯುತ್‌ ತಂತಿ ತುಳಿದು ವಿದ್ಯುತ್‌ ಪ್ರವಹಿಸಿ ಈಜುಕೊಳಕ್ಕೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸದ್ಯಕ್ಕೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮಾನ್ಯಳ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಈ ಸಂಬಂಧ ವರ್ತೂರು ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.