ನಿಷೇಧದ ನಡುವೆ ಟ್ಯಾಕ್ಸಿ ಸೇವೆ ನೀಡುತ್ತಿದ್ದ 103 ಬೈಕ್‌ಗಳ ವಶ

| N/A | Published : Jun 17 2025, 07:35 AM IST

e bike taxi
ನಿಷೇಧದ ನಡುವೆ ಟ್ಯಾಕ್ಸಿ ಸೇವೆ ನೀಡುತ್ತಿದ್ದ 103 ಬೈಕ್‌ಗಳ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಹೈಕೋರ್ಟ್‌ ಆದೇಶದ ನಂತರವೂ ಸೋಮವಾರ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಬೈಕ್‌ ಸವಾರರ ವಿರುದ್ಧ ಕ್ರಮ ಕೈಗೊಂಡಿರುವ ಸಾರಿಗೆ ಇಲಾಖೆ, 103 ಬೈಕ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ.

 ಬೆಂಗಳೂರು :  ಹೈಕೋರ್ಟ್‌ ಆದೇಶದ ನಂತರವೂ ಸೋಮವಾರ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಬೈಕ್‌ ಸವಾರರ ವಿರುದ್ಧ ಕ್ರಮ ಕೈಗೊಂಡಿರುವ ಸಾರಿಗೆ ಇಲಾಖೆ, 103 ಬೈಕ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ.

ರಾಜ್ಯದ ಸಾರಿಗೆ ನಿಯಮಗಳ ಅಡಿಯಲ್ಲಿ ಬೈಕ್‌ ಟ್ಯಾಕ್ಸಿ, ವೈಟ್‌ ಬೋರ್ಡ್‌ ವಾಹನಗಳ ಮೂಲಕ ಟ್ಯಾಕ್ಸಿ ಸೇವೆ ನೀಡುವಂತಿಲ್ಲ. ಬೈಕ್‌ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಯಾವುದೇ ನಿಯಮ ರೂಪುಗೊಂಡಿಲ್ಲ. ಆದರೂ, ಒಲಾ, ಉಬರ್‌, ರ್‍ಯಾಪಿಡೋ ಸೇರಿದಂತೆ ಇನ್ನಿತರ ಸಂಸ್ಥೆಗಳು ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿದ್ದವು. ಅದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆದು, ಜೂನ್‌ 15ರ ನಂತರ ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ನೀಡುವಂತಿಲ್ಲ ಎಂದು ಹೈಕೋರ್ಟ್‌ ಆದೇಶಿಸಿತ್ತು.

ಆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಗರದ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸಿದ ವೇಳೆ ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿದ್ದ 103 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲ 103 ಬೈಕ್‌ಗಳ ವಿರುದ್ಧ ಪ್ರಕರಣ ದಾಖಲಿಸಿ ತಲಾ 5 ಸಾವಿರ ರು. ದಂಡ ವಿಧಿಸಿದ್ದಾರೆ.

ಬೈಕ್‌ ಪಾರ್ಸೆಲ್‌ ಸೇವೆ

ಒಲಾ, ಉಬರ್‌, ರ್‍ಯಾಪಿಡೋ ಸೇರಿದಂತೆ ಎಲ್ಲ ಅಗ್ರಿಗೇಟರ್‌ಗಳು ಬೈಕ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಈಗಾಗಲೇ ಘೋಷಿಸಿವೆ. ತಮ್ಮ ಆ್ಯಪ್‌ಗಳಲ್ಲೂ ಬೈಕ್‌ ಟ್ಯಾಕ್ಸಿ ಸೇವೆ ಆಯ್ಕೆಯನ್ನು ತೆಗೆದು ಹಾಕಲಾಗಿದೆ. ಆದರೆ, ಒಲಾ, ಉಬರ್‌, ರ್‍ಯಾಪಿಡೋ ಸಂಸ್ಥೆಗಳು ಬೈಕ್‌ ಪಾರ್ಸೆಲ್‌ ಸೇವೆ ಆರಂಭಿಸಿವೆ. ಗ್ರಾಹಕರಿಗೆ ಟ್ಯಾಕ್ಸಿ ಸೇವೆಯ ಬದಲು ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಿಸುವ ಸೇವೆ ನೀಡಲಾಗುತ್ತದೆ. ಆದರೆ, ಈ ಸೇವೆಯ ಮೂಲಕವೇ ಬೈಕ್‌ ಸವಾರರು ಟ್ಯಾಕ್ಸಿ ಸೇವೆ ನೀಡುತ್ತಿರುವುದು ಸೋಮವಾರ ಪತ್ತೆಯಾಗಿದೆ. ಪಾರ್ಸೆಲ್‌ ಸೇವೆ ಹೆಸರಿನಲ್ಲಿ ಟ್ಯಾಕ್ಸಿ ಸೇವೆ ನೀಡುವವರ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ವಶಕ್ಕೆ ಪಡೆದ ಬೈಕ್‌ಗಳ ವಿವರ

ಸಾರಿಗೆ ಕಚೇರಿ ಜಪ್ತಿ ಮಾಡಲಾದ ಬೈಕ್‌ ದಾಖಲಾದ ಪ್ರಕರಣ ಸಂಖ್ಯೆ

ಆರ್‌ಟಿಒ ಕೇಂದ್ರ 8 8

ಆರ್‌ಟಿಒ ಪಶ್ಚಿಮ 16 16

ಆರ್‌ಟಿಒ ಪೂರ್ವ 12 12

ಆರ್‌ಟಿಒ ಉತ್ತರ 10 10

ಆರ್‌ಟಿಒ ದಕ್ಷಿಣ 10 10

ಆರ್‌ಟಿಒ ಜ್ಞಾನಭಾರತಿ 5 5

ಎಆರ್‌ಟಿಒ ದೇವನಹಳ್ಳಿ 5 5

ಆರ್‌ಟಿಒ ಯಲಹಂಕ 4 4

ಆರ್‌ಟಿಒ ಎಲೆಕ್ಟ್ರಾನಿಕ್ ಸಿಟಿ 15 15

ಆರ್‌ಟಿಒ ಕೆಆರ್‌ ಪುರ 13 13

ಆರ್‌ಟಿಒ ಚಂದಾಪುರ 5 5

ಒಟ್ಟು 103 103

 

Read more Articles on