ಕ್ರಿಕೆಟ್‌ ಟೂರ್ನಿ ಆಡಿಸೋದಾಗಿ ₹12.23 ಲಕ್ಷ ವಂಚನೆ

| Published : Feb 27 2024, 01:34 AM IST / Updated: Feb 27 2024, 09:08 AM IST

ಸಾರಾಂಶ

ವಿವಿಧ ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ ಆಡಲು ಅವಕಾಶ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ ಖಾಸಗಿ ಕ್ರಿಕೆಟ್‌ ಅಕಾಡೆಮಿ ತರಬೇತುದಾರನ ವಿರುದ್ಧ ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಷಿಯೇಷನ್‌(ಕೆಎಸ್‌ಸಿಎ) ಆಯೋಜಿಸುವ ಕ್ರಿಕೆಟ್‌ ಟೂರ್ನಿಗಳಲ್ಲಿ ಆಟವಾಡಲು ಅವಕಾಶ ಕೊಡಿಸುವುದಾಗಿ ಯುವ ಕ್ರಿಕೆಟಿಗನ ಪೋಷಕರಿಂದ ₹12.23 ಲಕ್ಷ ಪಡೆದು ವಂಚಿಸಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಖಾಸಗಿ ಕ್ರಿಕೆಟ್‌ ಅಕಾಡೆಮಿಯ ತರಬೇತುದಾರನ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ರಾಜಾಜಿನಗರ 5ನೇ ಬ್ಲಾಕ್ ನಿವಾಸಿ ಶಾಮ್‌ಪ್ರಸಾದ್‌ ಶೆಟ್ಟಿ ನೀಡಿದ ದೂರಿನ ಮೇರೆಗೆ ಗಾಂಧಿನಗರದ ರೋರ್‌ ಕ್ರಿಕೆಟ್‌ ಅಕಾಡೆಮಿ ತರಬೇತುದಾರ ಗೌರವ್‌ ಧೀಮಾನ್‌ ವಿರುದ್ಧ ವಂಚನೆ, ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ: ದೂರುದಾರ ಶಾಮ್‌ಪ್ರಸಾದ್‌ ಶೆಟ್ಟಿ ಅವರ ಪುತ್ರ ಆಯುಷ್‌ ಪೂರ್ಣಚಂದ್ರ ಶೆಟ್ಟಿ(23) ಕೆಎಸ್‌ಸಿಎ ನಡೆಸುವ ಪ್ರಥಮ ದರ್ಜೆ ಕ್ರಿಕೆಟ್‌ ಲೀಗ್‌ ಸಂಬಂಧ ಮೌಂಟ್‌ ಜಾಯ್‌ ಕ್ರಿಕೆಟ್‌ ಕ್ಲಬ್‌ ಪರ ಕ್ರಿಕೆಟ್‌ ಆಡುತ್ತಿದ್ದರು. 

ಈ ಟೂರ್ನಿಯಲ್ಲಿ ಉತ್ತಮ ರನ್‌ ಗಳಿಸಿದ್ದರಿಂದ ಮಿರ್ಜಾ ಇಸ್ಮಾಯಿಲ್‌ ಅಂಡರ್‌-23 ವಲಯ ಮಟ್ಟದ ಟೂರ್ನಿಗೆ ಅವಕಾಶ ಪಡೆದಿದ್ದರು. ಈ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಸರಿಯಾಗಿ ರನ್‌ ಗಳಿಸದ ಪರಿಣಾಮ ಉಳಿದ ಮೂರು ಪಂದ್ಯಗಳಿಗೆ ಅವಕಾಶ ನೀಡಿರಲಿಲ್ಲ.

ನಂತರ ಆಯುಷ್‌ ಪೂರ್ಣಚಂದ್ರ ಶೆಟ್ಟಿ ಗಾಂಧಿನಗರದ ಶೇಷಾದ್ರಿ ರಸ್ತೆಯಲ್ಲಿರುವ ರೋರ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿಗೆ ಸೇರಿಕೊಂಡಿದ್ದರು. 

ಅಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ ಗೌರವ್‌ ಧೀಮಾನ್ ಪರಿಚಯವಾಗಿದೆ. ಬಳಿಕ ಆಯುಷ್‌ ಜತೆಗೆ ಮನೆಗೆ ಬಂದಿದ್ದ ಗೌರವ್‌, ದೂರದಾರ ಶಾಮ್‌ಪ್ರಸಾದ್‌ ಶೆಟ್ಟಿ ಅವರನ್ನು ಪರಿಚಯಿಸಿಕೊಂಡಿದ್ದಾರೆ.

ಕೆಎಸ್‌ಸಿಎ ಟೂರ್ನಿಗಳಲ್ಲಿ ಅವಕಾಶದ ಆಮಿಷ: ‘ಕೆಎಸ್‌ಸಿಎ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ಗೆ ಸೇರಿದ ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ನ ವ್ಯವಸ್ಥಾಪಕರು ಮುಂದೆ ನಡೆಯುವ ಎರಡು ದಿನದ ಪ್ರಥಮ ದರ್ಜೆ ಲೀಗ್‌ ಸರ್‌.ಮಿರ್ಜಾ ಇಸ್ಮಾಯಿಲ್‌ ಟ್ರೋಫಿ, ಟಿ-20 ಮಾದರಿಯ ಕಸ್ತೂರಿ ರಂಗನ್‌ ಮೆಮೋರಿಯಲ್‌ ಟ್ರೋಫಿ, 50 ಓವರನ್‌ನ ಏಕದಿನ ಪಂದ್ಯ ವೈ.ಎಸ್‌.ರಾಮಯ್ಯ ಮೆಮೋರಿಯಲ್ ಟ್ರೋಫಿ ಟೂರ್ನಮೆಂಟ್‌ಗಳಿಗೆ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ. 

ಈ ಟೂರ್ನಿ ಹಾಗೂ ಪ್ರಮುಖವಾಗಿ ಎಸ್‌.ಎ.ಶ್ರೀನಿವಾಸ ಮೆಮೋರಿಯಲ್‌ ಟ್ರೋಫಿ ಅಂಡರ್‌-23 ವಲಯ ಮಟ್ಟದ ಪಂದ್ಯಾವಳಿಗೆ ನಿಮ್ಮ ಮಗನಿಗೆ ಆರಂಭಕ ಆಟಗಾರನಾಗಿ ಅವಕಾಶ ಕೊಡಿಸುವೆ’ ಎಂದು ಆಮಿಷವೊಡ್ಡಿದ್ದರು.

ಹಂತ ಹಂತವಾಗಿ ₹12.23 ಲಕ್ಷ ಪಡೆದು ವಂಚನೆ: ‘2022-23ನೇ ಸಾಲಿನಲ್ಲಿ ಮೌಂಟ್‌ ಜಾಯ್ ಕ್ರಿಕೆಟ್‌ ಕ್ಲಬ್‌ ಪರ ಆಡದಂತೆ ಆಯುಷ್‌ಗೆ ತಿಳಿಸಿದ್ದ. ಮುಂಬರುವ ಟೂರ್ನಿಗಳಿಗೆ ಅವಕಾಶ ಕೊಡಿಸುವುದಾಗಿ ಹಾಗೂ ಒಳ್ಳೆಯ ಬ್ಯಾಟ್‌ಗಳು ಹಾಗೂ ತರಬೇತಿ ಕೊಡಿಸುವುದಾಗಿ ಆಯುಷ್‌ ತಂದೆಯಿಂದ ವಿವಿಧ ಹಂತಗಳಲ್ಲಿ ₹12.23 ಲಕ್ಷ ಪಡೆದಿದ್ದಾರೆ. 

ಬಳಿಕ ಯಾವುದೇ ಟೂರ್ನಿಗಳಲ್ಲಿ ಅವಕಾಶ ಕೊಡಿಸದೆ, ಕ್ರಿಕೆಟ್‌ ಸಾಮಾಗ್ರಿಗಳನ್ನು ಕೊಡಿಸದೆ ವಂಚಿಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಕೋಚ್‌ ತಂದೆ ಕ್ಷಮೆಯಾಚನೆ

ವಂಚನೆ ಸಂಬಂಧ ಶಾಮ್‌ಪ್ರಸಾದ್‌ ಉಪ್ಪಾರಪೇಟೆ ಠಾಣೆಗೆ ದೂರು ನೀಡಿದಾಗ ಎನ್‌ಸಿಆರ್‌ ಮಾಡಿಕೊಂಡಿದ್ದರು. ಈ ದೂರಿನ ವಿಚಾರ ತರಬೇತುದಾರ ಧೀಮಾನ್‌ ತಂದೆ ಸುನೀಲ್‌ ಕುಮಾರ್‌ ಅವರು ಕಳೆದ ಡಿ.2ರಂದು ಶಾಮ್‌ಪ್ರಸಾದ್‌ ಅವರನ್ನು ಭೇಟಿಯಾಗಿ ‘ನಾನೊಬ್ಬ ನಿವೃತ್ತ ಕರ್ನಲ್‌.  

ನಮ್ಮದು ಗೌರವಾನ್ವಿತ ಕುಟುಂಬ. ನನ್ನ ಮಗ ಮಾಡಿರುವ ಮೋಸಕ್ಕೆ ಕ್ಷಮೆ ಯಾಚಿಸುತ್ತೇನೆ. ಸದ್ಯ ಮಗ ವಿದೇಶಕ್ಕೆ ಹೋಗಿದ್ದು, ಆತ ವಾಪಸ್‌ ಆದ ಬಳಿಕ ನಿಮ್ಮ ಹಣವನ್ನು ವಾಪಾಸ್‌ ನೀಡುವೆ’ ಭರವಸೆ ನೀಡಿದ್ದರು.ಜೀವ ಬೆದರಿಕೆ

ತರಬೇತಿದಾರ ಧೀಮಾನ್‌ ವಿದೇಶದಿಂದ ವಾಪಸ್‌ ಬಂದ ಬಳಿಕ ಹಣ ವಾಪಸ್‌ ಕೇಳಿದ್ದಕ್ಕೆ ‘ನಿನ್ನ ಮಗನ ಭವಿಷ್ಯ ಹಾಳು ಮಾಡುತ್ತೇನೆ. ನನಗೆ ರೌಡಿಗಳ ಪರಿಚಯವಿದ್ದು, ಅವರಿಂದ ನಿನ್ನ ಮಗನನ್ನು ಅಪಘಾತ ಮಾಡಿಸಿ ಕೊಲೆ ಮಾಡಿಸುತ್ತೇನೆ ಎಂದು ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. 

ಅಷ್ಟೇ ಅಲ್ಲದೆ, ನನ್ನ ತಂದೆ ನಿವೃತ್ತ ಕರ್ನಲ್‌ ಆಗಿದ್ದು, ಅವರಿಗೆ ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಪರಿಚಯವಿದೆ. ನೀನು ನನ್ನನ್ನು ಏನು ಮಾಡಲು ಸಾಧ್ಯವಿಲ್ಲ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ಶಾಮ್‌ಪ್ರಸಾದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.