ಅಪೆ ಆಟೋ ಉರುಳಿ 12 ಮಹಿಳಾ ಕಾರ್ಮಿಕರಿಗೆ ಗಾಯ

| N/A | Published : May 22 2025, 11:50 PM IST / Updated: May 23 2025, 08:46 AM IST

ಸಾರಾಂಶ

ಗಾರ್ಮೆಂಟ್ಸ್ ಕಾರ್ಮಿಕರನ್ನು ಸಾಗಿಸುತ್ತಿದ್ದ ಅಪೆ ಆಟೋ ಮಗುಚಿ ಬಿದ್ದು ಚಾಲಕ ಸೇರಿದಂತೆ ೧೨ ಮಂದಿ ಮಹಿಳಾ ಕಾರ್ಮಿಕರು ಗಾಯಗೊಂಡಿರುವ ಘಟನೆ ಪಟ್ಟಣದ ಮಳವಳ್ಳಿ ರಸ್ತೆಯಲ್ಲಿ ಬುಧವಾರ ಸಂಜೆ ಜರುಗಿದೆ.

  ಮದ್ದೂರು : ಗಾರ್ಮೆಂಟ್ಸ್ ಕಾರ್ಮಿಕರನ್ನು ಸಾಗಿಸುತ್ತಿದ್ದ ಅಪೆ ಆಟೋ ಮಗುಚಿ ಬಿದ್ದು ಚಾಲಕ ಸೇರಿದಂತೆ ೧೨ ಮಂದಿ ಮಹಿಳಾ ಕಾರ್ಮಿಕರು ಗಾಯಗೊಂಡಿರುವ ಘಟನೆ ಪಟ್ಟಣದ ಮಳವಳ್ಳಿ ರಸ್ತೆಯಲ್ಲಿ ಬುಧವಾರ ಸಂಜೆ ಜರುಗಿದೆ.

ತಾಲೂಕಿನ ಗೆಜ್ಜಲಗೆರೆ ಶಾಹಿ ಎಕ್ಸ್‌ಪೋರ್ಟ್ ಕಾರ್ಖಾನೆಯ ಕಾರ್ಮಿಕರಾದ ಪೂರ್ಣಿಮಾ, ಸುಶೀಲಮ್ಮ, ಪವಿತ್ರ, ಉಮೇಶ್, ಶೈಲಜಾ, ರೇಣುಕಾ, ಶೋಭಾ, ಪ್ರಭಾಮಣಿ, ಸುಕನ್ಯಾ, ಸತ್ಯಮ್ಮ ಹಾಗೂ ಆಟೋ ಚಾಲಕ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಲಾಯಿತು.

ಈ ಪೈಕಿ ತೀವ್ರವಾಗಿ ಗಾಯಗೊಂಡಿರುವ ಪೂರ್ಣಿಮಾ ಅವರನ್ನು ಜೆಎಸ್‌ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದವರಿಗೆ ಮದ್ದೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರು ಸೇರಿದಂತೆ ಸುಮಾರು ೧೫ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಮದ್ದೂರು ತಾಲೂಕಿನ ಉಪ್ಪಿನಕೆರೆ, ನಗರಕೆರೆ ಮತ್ತು ಕೆ.ಹೊನ್ನಲಗೆರೆ ಗ್ರಾಮದವರಾಗಿದ್ದು, ಗೆಜ್ಜಲಗೆರೆಯ ಶಾಹಿ ಎಕ್ಸ್‌ಫೋರ್ಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.

ಬುಧವಾರ ಸಂಜೆ ಗಾರ್ಮೆಂಟ್ ಕೆಲಸ ಮುಗಿಸಿದ ನಂತರ ಮಹಿಳೆಯರು ಸೇರಿದಂತೆ ಸುಮಾರು ೧೫ಕ್ಕೂ ಹೆಚ್ಚು ಮಂದಿ ತಮ್ಮ ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದರು. ಸಂಜೆ ೬.೩೦ ಸುಮಾರಿಗೆ ಮದ್ದೂರು-ಮಳವಳ್ಳಿ ರಸ್ತೆಯ ತಾಯಮ್ಮ ಮಲ್ಲಯ್ಯ ಕಾನ್ವೆಂಟ್ ಬಳಿ ಮಳವಳ್ಳಿ ಕಡೆಯಿಂದ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ಗೆ ಆಟೋ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಇದೇ ವೇಳೆ ಬೀದಿ ನಾಯಿಯೊಂದು ರಸ್ತೆಗೆ ಅಡ್ಡಲಾಗಿ ನುಗ್ಗಿದೆ. ಆಟೋ ಚಾಲಕ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಧಾವಂತದಲ್ಲಿ ಎಡಭಾಗಕ್ಕೆ ತಿರುಗಿಸಿದಾಗ ಆಟೋ ಎರಡು ಮೂರು ಬಾರಿ ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪೊಲೀಸರು ಸಾರ್ವಜನಿಕರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಶಾಹಿ ಗಾರ್ಮೆಂಟ್ಸ್‌ನ ಮಾನವ ಸಂಪನ್ಮೂಲ ವ್ಯವಸ್ಥಾಪಕ ವಿಶ್ವನಾಥ್, ಶಿವಪ್ರಸಾದ್, ವೆಲ್‌ಫೇರ್ ಆಫೀಸರ್ಸ್‌ಗಳಾದ ರಾಜಶೇಖರ್, ಸ್ಮಿತಾ ಸೇರಿದಂತೆ ಹಲವು ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದರು.

ವೇತನ ಸಹಿತ ರಜೆಗೆ ಒತ್ತಾಯ:

ಆಟೋ ಉರುಳಿ ಬಿದ್ದು ಅಪಘಾತದಲ್ಲಿ ಗಾಯಗೊಂಡಿರುವ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕೆಂದು ಕರ್ನಾಟಕ ಇಂಡಿಪೆಂಡೆಂಟ್ ಗಾರ್ಮೆಂಟ್ ವರ್ಕರ್ಸ್ ಸಂಘದ ಕಾರ್ಯದರ್ಶಿ ಉಮೇಶ್ ಶಾಹಿ ಗಾರ್ಮೆಂಟ್ಸ್ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಮೈಸೂರಿನ ಜೆಎಸ್‌ಎಸ್ ಮತ್ತು ಮದ್ದೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರನ್ನು ಭೇಟಿ ಮಾಡಿ ಅಪಘಾತದ ವಿವರ ಪಡೆದುಕೊಂಡ ಸಂಘಟನೆಯ ಕಾರ್ಯದರ್ಶಿ ಉಮೇಶ್ ಮತ್ತಿತರ ಕಾರ್ಮಿಕ ಮುಖಂಡರು ಗಾಯಾಳುಗಳಿಗೆ ನೈತಿಕ ಸ್ಥೈರ್ಯ ತುಂಬಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಕಾರ್ಖಾನೆ ಆಡಳಿತ ಮಂಡಳಿ ಗಾಯಾಳುಗಳು ಚೇತರಿಸಿಕೊಳ್ಳುವವರೆಗೆ ಅವರಿಗೆ ವೇತನ ಸಹಿತ ರಜೆ ನೀಡಬೇಕು ಮತ್ತು ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Read more Articles on