ಪೊಲೀಸರು ಜಪ್ತಿ ಮಾಡಿದ್ದ 150 ವಾಹನಗಳು ಶ್ರೀರಾಮಪುರದ ಜಕ್ಕರಾಯನಕೆರೆ ಮೈದಾನದಲ್ಲಿ ಬೆಂಕಿಗಾಹುತಿ

| N/A | Published : Jan 30 2025, 01:45 AM IST / Updated: Jan 30 2025, 05:14 AM IST

ಪೊಲೀಸರು ಜಪ್ತಿ ಮಾಡಿದ್ದ 150 ವಾಹನಗಳು ಶ್ರೀರಾಮಪುರದ ಜಕ್ಕರಾಯನಕೆರೆ ಮೈದಾನದಲ್ಲಿ ಬೆಂಕಿಗಾಹುತಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಾಮಪುರದ ಜಕ್ಕರಾಯನಕೆರೆ ಮೈದಾನದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ವಿವಿಧ ಪ್ರಕರಣಗಳಲ್ಲಿ ಪೊಲೀಸರು ಜಪ್ತಿ ಮಾಡಿ ನಿಲುಗಡೆ ಮಾಡಿದ್ದ ಸುಮಾರು 150 ವಾಹನಗಳು ಬೆಂಕಿಗಾಹುತಿಯಾಗಿವೆ.

 ಬೆಂಗಳೂರು : ಶ್ರೀರಾಮಪುರದ ಜಕ್ಕರಾಯನಕೆರೆ ಮೈದಾನದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ವಿವಿಧ ಪ್ರಕರಣಗಳಲ್ಲಿ ಪೊಲೀಸರು ಜಪ್ತಿ ಮಾಡಿ ನಿಲುಗಡೆ ಮಾಡಿದ್ದ ಸುಮಾರು 150 ವಾಹನಗಳು ಬೆಂಕಿಗಾಹುತಿಯಾಗಿವೆ.

ಬುಧವಾರ ಬೆಳಗ್ಗೆ ಸುಮಾರು 11.30ಕ್ಕೆ ನಡೆದ ಈ ಬೆಂಕಿ ಅವಘಡದಲ್ಲಿ 131 ದ್ವಿಚಕ್ರ ವಾಹನಗಳು, 14 ನಾಲ್ಕು ಚಕ್ರದ ವಾಹನಗಳು ಹಾಗೂ 3 ಆಟೋರಿಕ್ಷಾಗಳು ಸುಟ್ಟು ಕರಕಲಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 4 ತಾಸು ಕಾರ್ಯಾಚರಣೆ: ನಗರದ ಸುಮಾರು 70 ಪೊಲೀಸ್‌ ಠಾಣೆಗಳ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಾಹನಗಳನ್ನು ನಿಲುಗಡೆ ಮಾಡುವ ಜಕ್ಕರಾಯನ ಕೆರೆ ಮೈದಾನದಲ್ಲಿ ವಿವಿಧ ಮಾದರಿಯ ಸುಮಾರು 500 ವಾಹನಗಳು ಇದ್ದವು. ಈ ಜಾಗಾದಲ್ಲಿ ಬುಧವಾರ ಬೆಳಗ್ಗೆ ದಟ್ಟ ಹೊಗೆ ಕಾಣಿಸಿಕೊಂಡು ದಿಢೀರ್‌ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಸ್ಥಳೀಯರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದು, ತಕ್ಷಣ 2 ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾದರು. ಆದರೆ, ಬೆಂಕಿ ವ್ಯಾಪಿಸಿ ನೂರಕ್ಕೂ ಅಧಿಕ ವಾಹನಗಳಿಗೆ ಹೊತ್ತಿಕೊಂಡು ಬೆಂಕಿ ಪ್ರಮಾಣ ಜಾಸ್ತಿಯಾಗಿದೆ. ಹೀಗಾಗಿ ಮತ್ತೆರಡು ಅಗ್ನಿಶಾಮ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡು ಸುಮಾರು 4 ತಾಸು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ವಿಭಾಗದ ಡಿಸಿಪಿ ಸೈದುಲ್‌ ಅದಾವತ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಯಾರೋ ಬೀಡಿ ಅಥವಾ ಸಿಗರೇಟ್‌ ಸೇದಿ ಎಸೆದ ಪರಿಣಾಮ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಶ್ರೀರಾಮಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರವಷ್ಟೇ ರಾಜಾಜಿನಗರದ ಡಾ.ರಾಜ್‌ಕುಮಾರ್‌ ರಸ್ತೆಯ ಓಕಿನೋವಾ ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ, ಸುಮಾರು 30 ಎಲೆಕ್ಟ್ರಿಕ್‌ ಬೈಕ್‌ಗಳು ಬೆಂಕಿಗಾಹುತಿಯಾಗಿದ್ದವು. ಇದರ ಬೆನ್ನಲ್ಲೇ ಜಕ್ಕರಾಯನಕೆರೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ.

ಘಟನಾ ಸ್ಥಳದಲ್ಲಿ ಭಾರೀ ಜನ: ಜಕ್ಕರಾಯನಕೆರೆ ಮೈದಾನದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಸಮಾಯಿಸಿದ್ದರು. ಬೆಂಕಿ ನಂದಿಸುವ ಕಾರ್ಯಾಚರಣೆ ಅಡಚಣೆಯಾಗುವ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರನ್ನು ದೂರಕ್ಕೆ ಕಳುಹಿಸಿದರು. ಅಗ್ನಿಶಾಮಕ ಸಿಬ್ಬಂದಿ ಓಡಾಟಕ್ಕೆ ಅನುವು ಮಾಡಿಕೊಟ್ಟರು. ಸುಮಾರು 25ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಾಹನಗಳನ್ನು ಜಕ್ಕರಾಯನಕೆರೆ ಮೈದಾನದಲ್ಲಿ ನಿಲುಗಡೆ ಮಾಡಲಾಗಿತ್ತು. ಬೆಳಗ್ಗೆ ದಿಢೀರ್‌ ಬೆಂಕಿ ಹೊತ್ತಿಕೊಂಡು ನೂರಕ್ಕೂ ಅಧಿಕ ವಾಹನಗಳು ಬೆಂಕಿಗಾಹುತಿಯಾಗಿವೆ. ಈ ಜಾಗವನ್ನು ಆಗಾಗ ಸ್ವಚ್ಚ ಮಾಡಲಾಗುತ್ತಿತ್ತು. ಆದರೂ ಬೆಂಕಿ ಅವಘಡ ಸಂಭವಿಸಿದೆ. ಸದ್ಯಕ್ಕೆ ಬೆಂಕಿ ನಂದಿಸುವ ಕೆಲಸವಾಗಿದೆ. ಘಟನೆಗೆ ಕಾರಣವೇನು ಎಂದು ಪರಿಶೀಲಿಸಲಾಗುತ್ತಿದೆ.

। ಸೈದುಲ್‌ ಅದಾವತ್‌, ಉತ್ತರ ವಿಭಾಗದ ಡಿಸಿಪಿ