ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 16 ಬಾಂಗ್ಲಾ ಪ್ರಜೆಗಳು ಸೇರಿ 20 ಮಂದಿ ವಿದೇಶಿ ಪ್ರಜೆಗಳನ್ನು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರುನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 16 ಬಾಂಗ್ಲಾ ಪ್ರಜೆಗಳು ಸೇರಿ 20 ಮಂದಿ ವಿದೇಶಿ ಪ್ರಜೆಗಳನ್ನು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬೇಗೂರು ಹಾಗೂ ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಹಲವು ದಿನಗಳಿಂದ ವೀಸಾ ಇಲ್ಲದೆ ಅಕ್ರಮವಾಗಿ ವಿದೇಶಿ ಪ್ರಜೆಗಳು ನೆಲೆಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 16 ಮಂದಿ ಬಾಂಗ್ಲಾ ಪ್ರಜೆಗಳು ಹಾಗೂ ಓರ್ವ ಉಂಗಾಡ ದೇಶದ ಮಹಿಳೆ ಹಾಗೂ ಮೂವರು ನೈಜೀರಿಯಾ ಪ್ರಜೆಗಳು ಪತ್ತೆಯಾಗಿದ್ದಾರೆ. ಬಳಿಕ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆಓಓ)ಯಗೆ ಬಂಧಿತ ವಿದೇಶಿ ಪ್ರಜೆಗಳನ್ನು ಹಾಜರುಡಿಸಲಾಯಿತು. ಎಫ್‌ಆರ್‌ಓಓ ಸೂಚನೆ ಮೇರೆಗೆ ನಿರ್ಬಂಧನಾ ಕೇಂದ್ರಕ್ಕೆ ಬಂಧಿತರನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಆರ್‌ಓಓಗೆ ಆರೋಪಿಗಳ ಗಡಿಪಾರಿಗೆ ಸಹ ಶಿಫಾರಸು ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಎಫ್‌ಆರ್‌ಓಓ ಮೂಲಕ ಸ್ವದೇಶಕ್ಕೆ ಬಂಧಿತರನ್ನು ಕಳುಹಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.ಪಶ್ಚಿಮ ಬಂಗಾಳದ ಗಡಿ ಮೂಲಕ ಅಕ್ರಮವಾಗಿ ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದಿದ್ದಾರೆ. ಅಲ್ಲಿ ಗಡಿಯಲ್ಲಿ ಭದ್ರತಾ ಪಡೆಗಳ ಕಣ್ತಪ್ಪಿಸಿ ಒಳ ನುಸುಳಿದ ಆರೋಪಿಗಳು, ಬಳಿಕ ಕೋಲ್ಕತಾ ಪ್ರವೇಶಿಸಿದ್ದಾರೆ. ತರುವಾಯ ರೈಲುಗಳ ಮೂಲಕ ಬೆಂಗಳೂರಿಗೆ ವಲಸೆ ಬಂದು ಬಾಂಗ್ಲಾ ಪ್ರಜೆಗಳು ನೆಲೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ.ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಅವರು ಜೀವನ ಸಾಗಿಸುತ್ತಿದ್ದರು. ಹೆಬ್ಬಗೋಡಿ ಸುತ್ತಮುತ್ತ ಶೆಡ್‌ಗಳಲ್ಲಿ ಬಾಂಗ್ಲಾ ಪ್ರಜೆಗಳು ವಾಸವಾಗಿದ್ದರು. ಇತ್ತೀಚೆಗೆ ಅಕ್ರಮ ವಲಸೆಗರ ವಿರುದ್ಧ ವಿರೋಧ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ದನಿ ಎತ್ತಿದ್ದವು. ಅಲ್ಲದೆ ಕಾನೂನುಬಾಹಿರವಾಗಿ ನೆಲೆನಿಂತಿರುವ ವಿದೇಶಿಯರನ್ನು ಪತ್ತೆ ಹಚ್ಚಿ ಮುಲಾಜಿಲ್ಲದೆ ಗಡಿಪಾರು ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದರು. ಈ ಬೆನ್ನಲ್ಲೇ ಎಚ್ಚೆತ್ತ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರು, ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆಗಿಳಿದರು ಎಂದು ತಿಳಿದು ಬಂದಿದೆ.ಬಾಂಗ್ಲಾ ಪ್ರಜೆಗಳ ನೆರವಾದವರಿಗೆ ಗಾಳ?
ಅಕ್ರಮ ಬಾಂಗ್ಲಾ ವಲಸಿಗರಿಗೆ ಸ್ಥಳೀಯವಾಗಿ ನೆರವಾದವರ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಹಲವು ವರ್ಷಗಳಿಂದ ಕಾನೂನುಬಾಹಿರವಾಗಿ ಬಾಂಗ್ಲಾ ಪ್ರಜೆಗಳು ವಾಸವಾಗಿದ್ದಾರೆ. ಇವರ ಪೂರ್ವಾಪರ ಗೊತ್ತಿದ್ದರೂ ಅವರಿಗೆ ಕೆಲಸ ಕೊಟ್ಟು ಕೆಲವರು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಡ್ರಗ್ಸ್ ಜಾಲದಲ್ಲಿ ಆಫ್ರಿಕಾ ಪ್ರಜೆಗಳು?ಮಾದಕ ವಸ್ತು ಮಾರಾಟ ಜಾಲದಲ್ಲಿ ಬಂಧಿತ ನಾಲ್ವರು ಆಫ್ರಿಕಾ ಪ್ರಜೆಗಳು ಪಾತ್ರ ವಹಿಸಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಈಗ ಬಂಧಿತ ನಾಲ್ವರ ಸಂಪರ್ಕ ಜಾಲವನ್ನು ಜಾಲಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.