ಮತ್ತೊಂದು ಬ್ಲೇಡ್‌ ಕಂಪನಿಯಿಂದ ಅಧಿಕ ಬಡ್ಡಿ ಆಸೆ ತೋರಿಸಿ 2.53 ಕೋಟಿ ವಂಚನೆ; ಮಾಲೀಕ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್‌

| Published : Jan 19 2024, 01:49 AM IST

ಮತ್ತೊಂದು ಬ್ಲೇಡ್‌ ಕಂಪನಿಯಿಂದ ಅಧಿಕ ಬಡ್ಡಿ ಆಸೆ ತೋರಿಸಿ 2.53 ಕೋಟಿ ವಂಚನೆ; ಮಾಲೀಕ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮತ್ತೊಂದು ಬ್ಲೇಡ್‌ ಕಂಪನಿಯಿಂದ ಅಧಿಕ ಬಡ್ಡಿ ಆಸೆ ತೋರಿಸಿ 2.53 ಕೋಟಿ ವಂಚನೆ; ಮಾಲೀಕ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೂಡಿಕೆ ನೆಪದಲ್ಲಿ ಅಧಿಕ ಬಡ್ಡಿಯ ಆಸೆ ತೋರಿಸಿ ಇಬ್ಬರು ವ್ಯಕ್ತಿಗಳಿಂದ ಬರೋಬ್ಬರಿ ₹2.53 ಕೋಟಿ ಪಡೆದು ವಂಚಿಸಿದ ಆರೋಪದಡಿ ಎಸ್‌5ಎಸ್‌ ಗ್ಲೋಬಲ್‌ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಮಾಲೀಕ ಸೇರಿ ಆರು ಮಂದಿ ಆರೋಪಿಗಳ ವಿರುದ್ಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಂಧ್ರಪ್ರದೇಶದ ಕಡಪ ಮೂಲದ ಸಂದಡಿ ನರಸಿಂಹರೆಡ್ಡಿ ಅವರು ನೀಡಿದ ದೂರಿನ ಮೇರೆಗೆ ಕೆ.ಆರ್‌.ಪುರ ಕಸ್ತೂರಿನಗರದ ಎಸ್‌5ಎಸ್‌ ಗ್ಲೋಬಲ್‌ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಮುಖ್ಯಸ್ಥ ಪ್ರತಾಪ್‌, ಇವರ ಪತ್ನಿಶ್ವೇತಾ, ಕಂಪನಿಯ ಕಾನೂನು ಸಲಹೆಗಾರ ಓಬಳೇಶ್‌, ಅಕೌಂಟೆಂಟ್‌ ಮಣಿ, ಚಾಲಕ ಗೋಪಿ ಹಾಗೂ ದೂರುದಾರರ ಸ್ನೇಹಿತ ಮಹಮದ್‌ ಮುಸ್ತಾಫಾ ಎಂಬುವವರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಹಲ್ಲೆ, ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?

ದೂರುದಾರ ಸಂದಡಿ ನರಸಿಂಹ ರೆಡ್ಡಿ ಅವರು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಸೈಂದಾಪುರದಲ್ಲಿ ವ್ಯವಸಾಯಗಾರರಾಗಿದ್ದಾರೆ. ಒಂದೂವರೆ ವರ್ಷದ ಹಿಂದೆ ಬೆಂಗಳೂರು ಮೂಲದ ಮಹಮದ್‌ ಮುಸ್ತಾಫಾ ಸೈಂದಾಪುರದಲ್ಲಿ ಜಮೀನು ಖರೀದಿಗೆ ಹೋಗಿದ್ದಾಗ ಸಂದಡಿ ನರಸಿಂಹರೆಡ್ಡಿಗೆ ಪರಿಚಿತರಾಗಿದ್ದರು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ವ್ಯವಹಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 2023ರ ಜನವರಿಯಲ್ಲಿ ಮುಸ್ತಾಫಾ ಅವರು ಎಸ್‌5ಎಸ್‌ ಗ್ಲೋಬಲ್‌ ಡೆವಲಪರ್ಸ್‌ ಕಂಪನಿಯ ಮಾಲೀಕ ಪ್ರತಾಪ್‌ ಅವರನ್ನು ತಿರುಪತಿಯಲ್ಲಿ ನರಸಿಂಹರೆಡ್ಡಿ ಅವರಿಗೆ ಪರಿಚಯಿಸಿದ್ದಾರೆ.

ಈ ವೇಳೆ ಪ್ರತಾಪ್‌, ‘ನೀವು ನನಗೆ ₹1 ಲಕ್ಷ ಕೊಟ್ಟರೆ 10 ತಿಂಗಳ ಬಳಿಕ ₹1.90 ಲಕ್ಷ ವಾಪಾಸ್‌ ನೀಡುತ್ತೇನೆ’ ಎಂದು ಹೇಳಿದ್ದಾರೆ. ಅದರಂತೆ ನರಸಿಂಹ ರೆಡ್ಡಿ ಮತ್ತು ಮುಸ್ತಾಫಾ ಇಬ್ಬರು ಕೆ.ಆರ್‌.ಪುರಂ ಕಸ್ತೂರಿನಗರದಲ್ಲಿರುವ ಪ್ರತಾಪ್‌ ಕಚೇರಿಗೆ ತೆರಳಿದ್ದಾರೆ. ಈ ವೇಳೆ ಪ್ರತಾಪ್‌ ಮತ್ತು ಆತನ ಪತ್ನಿ ಶ್ವೇತಾ ಆ ಕಚೇರಿಯಲ್ಲಿದ್ದ ಕೆಲವರನ್ನು ಪರಿಚಯಿಸಿ, ಇವರು ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ನೀನೂ ಹಾಕು, ನಾನೂ ಹಾಕುವೆ:

ಈ ವೇಳೆ ಮುಸ್ತಾಫಾ, ‘ನಾನು ಕಂಪನಿಯಲ್ಲಿ ಹಣ ಹೂಡುವೆ. ನೀನೂ ಹಣ ಹೂಡಿಕೆ ಮಾಡು. ನಿನಗೂ ಅಧಿಕ ಬಡ್ಡಿ ಬರುತ್ತದೆ’ ಎಂದು ಹೇಳಿದ್ದಾರೆ. 2023ರ ಫೆಬ್ರವರಿ 14ರಂದು ಪ್ರತಾಪ್‌, ಮುಸ್ತಾಫಾನಿಂದ ₹5 ಲಕ್ಷ ಪಡೆದಿದ್ದಾರೆ. ಈ ವೇಳೆ ಮುಸ್ತಾಫಾ, ‘ನೀನು ಹಣ ಹೂಡಿಕೆ ಮಾಡು. ₹1 ಲಕ್ಷಕ್ಕೆ ಪ್ರತಿ ತಿಂಗಳು ₹19 ಸಾವಿರ ಬಡ್ಡಿ ನೀಡುತ್ತಾರೆ’ ಎಂದು ನರಸಿಂಹ ರೆಡ್ಡಿಗೆ ಒತ್ತಾಯ ಮಾಡಿದ್ದಾರೆ.

ಮುಸ್ತಾಫಾನ ಒತ್ತಾಯಕ್ಕೆ ಮಣಿದ ನರಸಿಂಹ ರೆಡ್ಡಿ ಹಾಗೂ ಇವರ ಸ್ನೇಹಿತ ಪಂದೇಟಿ ವೆಂಕಟೇಶಯ್ಯ ಅವರು 2023ರ ಮೇ ತಿಂಗಳಿಂದ ಸೆಪ್ಟೆಂಬರ್‌ ವರೆಗೆ ನಗದು, ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮುಖಾಂತರ ಕ್ರಮವಾಗಿ ₹1.38 ಕೋಟಿ ಮತ್ತು ₹1.15 ಕೋಟಿಯನ್ನು ಪ್ರತಾಪ್‌ ಕಂಪನಿಗೆ ಹೂಡಿಕೆ ಮಾಡಿದ್ದಾರೆ. ಈ ಸಂಬಂಧ ಕಂಪನಿ ಜತೆಗೆ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ.

ಇ.ಡಿ. ದಾಳಿ ಬಗ್ಗೆ ವಾಟ್ಸಾಪ್‌ ಸಂದೇಶ:

ಸೆ.24ರಂದು ಕಂಪನಿ ಮಾಲೀಕ ಪ್ರತಾಪ್‌ ಅವರು ನರಸಿಂಹರೆಡ್ಡಿ ಮತ್ತು ಪಂದೇಟಿ ವೆಂಕಟೇಶಯ್ಯ ಅವರ ಮೊಬೈಲ್‌ಗೆ ‘ನನ್ನ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ.) ದಾಳಿಯಾಗಿದ್ದು, ನನ್ನ ಬಳಿ ಇದ್ದ ಹಣವನ್ನು ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಎಲ್ಲರಿಗೂ ಹಣವನ್ನು ನೀಡಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಹಣ ನೀಡುವುದಾಗಿ’ ವಾಟ್ಸಾಪ್‌ ಸಂದೇಶ ಕಳುಹಿಸಿದ್ದಾರೆ.

ಇದರಿಂದ ಗಾಬರಿಗೊಂಡ ನರಸಿಂಹರೆಡ್ಡಿ ಮತ್ತು ವೆಂಕಟೇಶಯ್ಯ 2023ರ ಡಿಸೆಂಬರ್‌ನಲ್ಲಿ ಆಂಧ್ರದಿಂದ ಬೆಂಗಳೂರಿಗೆ ಬಂದು ಹೋಟೆಲ್‌ನಲ್ಲಿ ಪ್ರತಾಪ್‌ನನ್ನು ಭೇಟಿ ಮಾಡಿ ವಿಚಾರಿಸಿದಾಗ, ‘ನಾನು ಕೊಟ್ಟಾಗ ಹಣ ಪಡೆದುಕೊಳ್ಳಬೇಕು. ಗಾಂಚಲಿ ಮಾಡಿದರೆ, ಯಾವ ಹಣವನ್ನೂ ಕೊಡುವುದಿಲ್ಲ’ ಎಂದು ಪ್ರತಾಪ್‌ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಚೇರಿ ಬಳಿ ಹೋಗಿದ್ದಾಗ ಹಲ್ಲೆ ಆರೋಪ:

ಕಸ್ತೂರಿನಗರದ ಕಚೇರಿ ಬಳಿ ತೆರಳಿದ್ದಾಗ ಪ್ರತಾಪ್‌, ಆತನ ಪತ್ನಿ ಶ್ವೇತಾ ಹಾಗೂ ಇತರರು ‘ನಾವು ಹಣ ವಾಪಾಸ್‌ ಕೊಡುವ ತನಕ ಕಾಯಿರಿ. ಇಲ್ಲವಾದರೆ, ಸುಳ್ಳು ಕೇಸುಗಳನ್ನು ಹಾಕಿಸಿ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ, ನಮ್ಮ ಮೇಲೆ ಹಲ್ಲೆ ಮಾಡಿ ಕಚೇರಿಯಿಂದ ಹೊರಗೆ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸ್ನೇಹಿತನಿಂದಲೂ ಜೀವ ಬೆದರಿಕೆ ಆರೋಪ:

ಕಂಪನಿಯ ಮಾಲೀಕ ಪ್ರತಾಪ್‌ನನ್ನು ಪರಿಚಯಿಸಿ, ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದ ಮುಸ್ತಾಫಾನನ್ನು ಜ.11ರಂದು ಮೆಜೆಸ್ಟಿಕ್‌ನಲ್ಲಿ ಭೇಟಿ ಮಾಡಿದ್ದೆವು. ಈ ವೇಳೆ ಆತ ‘ಪ್ರತಾಪ್‌ ನನ್ನ ಹಣವನ್ನು ವಾಪಾಸ್ ಕೊಡುವುದಾಗಿ ಹೇಳಿದ್ದಾರೆ. ನೀವಿಬ್ಬರೂ ಸುಮ್ಮನೆ ಊರಿಗೆ ಹೋಗಿ. ಇಲ್ಲವಾದರೆ, ನನಗೂ ಹಣ ವಾಪಾಸ್‌ ಬರುವುದಿಲ್ಲ. ಒಂದು ವೇಳೆ ನಿಮ್ಮಿಂದ ತೊಂದರೆಯಾಗಿ ನನಗೆ ಹಣ ವಾಪಾಸ್ ಬಾರದಿದ್ದರೆ, ನಿಮ್ಮ ಪ್ರಾಣ ತೆಗೆಯುತ್ತೇನೆ’ ಎಂದು ಕೊಲೆ ಬೆದರಿಕೆ ಹಾಕಿ, ಇಬ್ಬರ ಕತ್ತಿನ ಪಟ್ಟಿ ಹಿಡಿದು ಹಲ್ಲೆ ಮಾಡಿದ್ದಾರೆ’ ಎಂದು ನರಸಿಂಹರೆಡ್ಡಿ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---