ಸಾರಾಂಶ
ಹಲಗೂರು : ಮನೆ ಬಾಗಿಲ ಚಿಲಕ ಮೀಟಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಜೆಪಿಎಂ ಬಡಾವಣೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಮೂಲತಃ ಹಲಗೂರು ಗ್ರಾಮದ ವಾಸಿ ಚಂದನ್ ಅವರ ಮನೆಗೆ ಗುರುವಾರ ರಾತ್ರಿ 7.30ರ ಸಮಯದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮನೆ ಹಿಂಭಾಗಿಲನ ಚಿಲಕವನ್ನು ಮೀಟಿ ಒಳ ನುಗ್ಗಿ ಮನೆಯಲ್ಲಿದ್ದ 40 ಗ್ರಾಂ ಚಿನ್ನ 700 ಗ್ರಾಂ ಬೆಳ್ಳಿ ಪದಾರ್ಥಗಳು ಸೇರಿ 2,69,000 ಮೌಲ್ಯದ ಚಿನ್ನ ಬೆಳ್ಳಿ ದೋಚಿ ಪರಾರಿಯಾಗಿದ್ದಾರೆ.
ಚಂದನ್ ಎಂದಿನಂತೆ ಬೆಳಗ್ಗೆ ತಮ್ಮ ಪಾತ್ರೆ ಅಂಗಡಿಯಲ್ಲಿ ವ್ಯಾಪಾರ ಮುಗಿಸಿಕೊಂಡು ರಾತ್ರಿ 7.30ರಲ್ಲಿ ಅವರ ಪತ್ನಿ ಶ್ರೀಪ್ರಿಯಾ ಅವರ ಜೊತೆ ಮನೆಗೆ ಹೋದ ವೇಳೆ ಅವರ ಪತ್ನಿ ಮನೆ ಹಿಂಭಾಗಕ್ಕೆ ಊಟದ ಪಾತ್ರೆ ಇಡಲು ಹೋದಾಗ ಕಳ್ಳರು ಅವರನ್ನು ನೋಡಿ ಪರಾರಿಯಾಗಿದ್ದಾರೆ.
ತಕ್ಷಣ ಚಂದನ್ ಹಲಗೂರು ಪೊಲೀಸ್ ಠಾಣೆಗೆ ದೂರವಾಣಿ ಮುಖಾಂತರ ವಿಷಯ ತಿಳಿಸಿದ ಮೇರೆಗೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದರು. ಮನೆಗೆ ಬಂದಾಗ ಮನೆ ಪಕ್ಕದಲ್ಲಿ ಒಂದು ಕಾರು ನಿಂತಿತ್ತು. ನನ್ನ ಹೆಂಡತಿ ನೋಡಿದ ಇಬ್ಬರು ಕಳ್ಳರು ಮನೆ ಒಳಗಡೆಯಿಂದ ಓಡಿ ಹೋಗಿ ಕಾರಿನಲ್ಲಿ ಪರಾರಿಯಾದರು. ಒಟ್ಟು ಮೂರು ಜನ ಕಾರಿನಲ್ಲಿದ್ದಾರೋ ಎಂದು ತಿಳಿಸಿದ್ದಾರೆ.
ರಾತ್ರಿ 7.30ರಲ್ಲೇ ಕಳ್ಳತನವಾಗಿರುವುದರಿಂದ ಜೆಪಿಎಂ ಬಡಾವಣೆಯ ನಿವಾಸಿಗಳು ಭಯಭೀತರಾಗಿದ್ದಾರೆ. ಈ ಬಡಾವಣೆಯಲ್ಲಿ ಹೆಚ್ಚು ವ್ಯಾಪಾರಸ್ಥರು ಹಾಗೂ ಸರ್ಕಾರಿ ನೌಕರಗಳೇ ವಾಸ ಮಾಡುತ್ತಾರೆ. ಕಾರ್ಯನಿಮಿತ್ತ ಹಾಗೂ ಮದುವೆ ಶುಭ ಸಮಾರಂಭಗಳಿಗೆ ಹೋಗಬೇಕಾದರೆ ಮನೆಯವರು ಪೊಲೀಸ್ ಠಾಣೆಗೆ ವಿಷಯ ತಿಳಿಸಿ ಮತ್ತು ನಿಮ್ಮ ಅಕ್ಕಪಕ್ಕದ ಮನೆಯವರಿಗೂ ವಿಷಯ ತಿಳಿಸುವುದು ಸೂಕ್ತ.
ಮನೆಯಲ್ಲಿ ಸಿಸಿ ಕ್ಯಾಮೆರಾ ಹಾಗೂ ಬಾಗಿಲು ತೆರೆದಾಗ ಅಲಾರಂಗಳನ್ನು ಅಳವಡಿಸಿದರೆ ಇಂತಹ ಅನಾಹುತಗಳು ಆಗುವುದನ್ನು ತಪ್ಪಿಸಬಹುದು. ನಿಮ್ಮ ರಸ್ತೆಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದರೆ ತಕ್ಷಣ ಪೊಲೀಸ್ ಠಾಣೆಗೆ ತಿಳಿಸುವಂತೆ ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ತಿಳಿಸಿದ್ದಾರೆ.
ವಿಷಯ ತಿಳಿದ ಸ್ಥಳಕ್ಕೆ ಬೆರಳು ತಜ್ಞರು, ಶ್ವಾನದಳ ಪರಿಶೀಲಿಸಿದರು. ಮಂಡ್ಯ ಜಿಲ್ಲಾ ಎಎಸ್ಪಿ ಗಂಗಾಧರ್ ಭೇಟಿ ನೀಡಿ ಮಾಹಿತಿ ಪಡೆದಿದರು. ಹಲಗೂರು ಠಾಣೆ ಪೊಲೀಸರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.