ಸಾರಾಂಶ
ಬೆಂಗಳೂರು : ಬೆಳ್ಳಿ ಆಭರಣ ತಯಾರಿಸುವ ಅಂಗಡಿಯಲ್ಲಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಬೆಳ್ಳಿ ಗಟ್ಟಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಸುಮಾರು 10 ಲಕ್ಷ ರು. ಮೌಲ್ಯದ 11 ಕೆ.ಜಿ. 933 ಗ್ರಾಂ ಬೆಳ್ಳಿಗಟ್ಟಿ ಜಪ್ತಿ ಮಾಡಿದ್ದಾರೆ.
ತಮಿಳುನಾಡು ಮೂಲದ ದರ್ಶನ್ ಬೋತ್ರಾ(36) ಮತ್ತು ಕುಂದನ್ ಸಿಂಗ್(28) ಬಂಧಿತರು. ಆರೋಪಿಗಳು ಡಿ.23ರಂದು ಕಬ್ಬನ್‌ಪೇಟೆಯ ವರದರಾಜ್ ಪೆರುಮಾಳ್ ಮಾಲೀಕತ್ವದ ಸಿಲ್ವರ್ ವರ್ಕ್ ಶಾಪ್‌ನಲ್ಲಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು 19 ಕೆ.ಜಿ. 800 ಗ್ರಾಂ ಬೆಳ್ಳಿ ಗಟ್ಟಿ ಕಳವು ಮಾಡಿದ್ದರು.
ಮನಸ್ತಾಪಗೊಂಡ ಪರಿಚಿತನಿಂದ ಕೃತ್ಯ:
ಅಂಗಡಿ ಮಾಲೀಕ ವರದರಾಜ್ ಪೆರುಮಾಳ್ ಮತ್ತು ಆರೋಪಿ ದರ್ಶನ್ ಪರಿಚಿತರು. ದರ್ಶನ್ ಬೆಳ್ಳಿ ಖರೀದಿಸಲು ಆಗಾಗ ಅಂಗಡಿಗೆ ಬರುತ್ತಿದ್ದ. ಇತ್ತೀಚೆಗೆ ವ್ಯವಹಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಮೂಡಿತ್ತು. ಹೀಗಾಗಿ ದರ್ಶನ್ ಬೆಳ್ಳಿ ಕಳವು ಮಾಡಲು ಸಂಚು ರೂಪಿಸಿದ್ದ. ಡಿ.23ರಂದು ಬೆಳಗ್ಗೆ ಆರೋಪಿ ದರ್ಶನ್ ಹಾಗೂ ಆತನ ಇಬ್ಬರು ಸಚಹರರು ಅಂಗಡಿಗೆ ಬಂದಿದ್ದಾರೆ. ಈ ವೇಳೆ ಮಾಲೀಕ ವರದರಾಜ್ ಇರಲಿಲ್ಲ. ದರ್ಶನ್ ಪರಿಚಿತ ವ್ಯಕ್ತಿಯಾಗಿದ್ದ ಹಿನ್ನೆಲೆಯಲ್ಲಿ ಅಂಗಡಿ ಸಿಬ್ಬಂದಿ ಮಾತನಾಡಿಸಿದ್ದಾರೆ. ಈ ವೇಳೆ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ದರ್ಶನ್ ಸಹಚರರು 19 ಕೆ.ಜಿ.800 ಗ್ರಾಂ ತೂಕದ ಬೆಳ್ಳಿ ಗಟ್ಟಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ವರದರಾಜ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.