ಸಾರಾಂಶ
ಬೆಂಗಳೂರು : ವಿದೇಶದಲ್ಲಿ ಹೂಡಿಕೆ ನೆಪದಲ್ಲಿ ಅಧಿಕ ಲಾಭ ಮತ್ತು ಬಡ್ಡಿ ಆಸೆ ತೋರಿಸಿ ಉದ್ಯಮಿ ಹಾಗೂ ಅವರ ಸ್ನೇಹಿತರಿಂದ 25 ಕೋಟಿ ರು. ಪಡೆದು ವಂಚಿಸಿದ ಆರೋಪ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿ ನಿವಾಸಿ ರಾಮಕೃಷ್ಣ ರಾವ್ ಬಂಧಿತ. ವಂಚನೆಗೆ ಒಳದಾದ ಬಸವೇಶ್ವರನಗರದ ಉದ್ಯಮಿ ವಿವೇಕ್ ಪಿ.ಹೆಗಡೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಬಂಧಿತ ಆರೋಪಿಯ ಪತ್ನಿ ರಾಜೇಶ್ವರಿ ರಾವ್, ಪುತ್ರ ರಾಹುಲ್ ತೋನ್ಸೆ, ಪುತ್ರಿ ರಕ್ಷಾ ತೋನ್ಸೆ ಮತ್ತು ಅಳಿಯ ಚೇತನ್ ನಾರಾಯಣ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ:
ಉದ್ಯಮಿ ವಿವೇಕ್ ಹೆಗಡೆಗೆ 2023ರ ಫೆಬ್ರವರಿಯಲ್ಲಿ ಸ್ನೇಹಿತರ ಮುಖಾಂತರ ಬಂಧಿತ ರಾಮಕೃಷ್ಣ ರಾವ್ ಪರಿಚಯವಾಗಿದ್ದರು. ಈ ವೇಳೆ ಆರೋಪಿಯು ತನ್ನ ಇಬ್ಬರು ಮಕ್ಕಳು ಹಾಗೂ ಅಳಿಯ ಮಧ್ಯಪ್ರಾಚ್ಯ ಮತ್ತು ಶ್ರೀಲಂಕಾದಲ್ಲಿ ಅತಿಥಿ ಸತ್ಕಾರ, ಕ್ಯಾಸಿನೋ, ಬಿಟ್‌ಕಾಯಿನ್ ಉದ್ಯಮಗಳಲ್ಲಿ ತೊಡಗಿದ್ದಾರೆ. ಉದ್ಯಮ ವಿಸ್ತರಿಸುವ ಸಂಬಂಧ ಹೆಚ್ಚಿನ ಬಂಡವಾಳದ ಅಗತ್ಯವಿದೆ ಎಂದು ವಾಟ್ಸಾಪ್ ಕಾಲ್ ಮುಖಾಂತರ ಮಕ್ಕಳ ಜತೆಗೆ ಮಾತನಾಡಿಸಿದ್ದಾರೆ.
ಈ ವೇಳೆ ಆರೋಪಿ ರಾಮಕೃಷ್ಣ ರಾವ್ ದುಬೈನಲ್ಲಿ ಅತಿಥಿ ಸತ್ಕಾರ ಉದ್ಯಮದಲ್ಲಿ ಹೂಡಿಕೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ರಾಸ್ ಅಲ್-ಖೈಮಾ ನಗರ ಕ್ಯಾಸಿನೋ ಮನರಂಜನ ಕೇಂದ್ರವಾಗಲಿದೆ. ಅಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ಲಾಭ ಗಳಿಸಬಹುದು ಎಂದಿದ್ದಾರೆ. ಅದಕ್ಕಾಗಿ ಸಾಲ ಅಥವಾ ಠೇವಣಿ ರೂಪದಲ್ಲಿ ಹಣದ ಅಗತ್ಯವಿದೆ ಎಂದಿದ್ದಾರೆ.
ಮಗಳು ಮತ್ತು ಅಳಿಯ ಶ್ರೀಲಂಕಾದ ಬೆಲ್ಲಾಜಿಯೋ ಎಂಬ ಕ್ಯಾಸಿನೋ ಟೇಬಲ್‌ಗಳನ್ನು ಹೊಂದಿದ್ದು, ಆ ವ್ಯವಹಾರವನ್ನು ಪುತ್ರ ರಾಹುಲ್ ನೋಡಿಕೊಳ್ಳುತ್ತಿದ್ದಾನೆ. ಉದ್ಯಮದಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದು ನಂಬಿಸಿದ್ದಾರೆ. ಇವರ ಮಾತು ನಂಬಿದ ಉದ್ಯಮಿ ವಿವೇಕ್, ಮೊದಲಿಗೆ ₹30 ಲಕ್ಷ ನೀಡಿದ್ದಾರೆ. ಇದಕ್ಕೆ ಭದ್ರತೆಗಾಗಿ ಐಷಾರಾಮಿ ಕಾರಿನ ಮೂಲ ದಾಖಲೆಗಳು ಮತ್ತು ಬ್ಯಾಂಕಿನ ಚೆಕ್‌ಗಳನ್ನು ಪಡೆದಿದ್ದಾರೆ.
ಶ್ರೀಲಂಕಾಗೆ ಕರೆದೊಯ್ದು ಉದ್ಯಮ ಪರಿಚಯ:
ಬಳಿಕ ಆರೋಪಿ ರಾಹುಲ್ ತೋನ್ಸೆ ಉದ್ಯಮಿ ವಿವೇಕ್ ಅವರನ್ನು ಶ್ರೀಲಂಕಾಗೆ ಕರೆದೊಯ್ದು ಐಷಾರಾಮಿ ಹೋಟೆಲ್‌ನಲ್ಲಿ ಉಳಿಸಿ ಚೆನ್ನಾಗಿ ನೋಡಿಕೊಂಡಿದ್ದಾನೆ. ನಂತರ ಬೆಲ್ಲಾಜಿಯೋ ಕ್ಯಾಸಿನೋಗೆ ಕರೆದೊಯ್ದು ತಂದೆ ರಾಮಕೃಷ್ಣ ರಾವ್ ಅವರ ಹೆಸರಿನಲ್ಲಿ ಎರಡು ಟೇಬಲ್ ಇರುವುದಾಗಿ ನಂಬಿಸಿದ್ದಾನೆ. ಬಳಿಕ ವಿವೇಕ್ ಭಾರತಕ್ಕೆ ವಾಪಾಸ್ ಆದ ಬಳಿಕ ಆರೋಪಿ ರಾಮಕೃಷ್ಣ ರಾವ್ ವಿವಿಧ ಆಮಿಷವೊಡ್ಡಿ ವಿವೇಕ್ ಅವರಿಂದ ಮಕ್ಕಳು ಮತ್ತು ಅಳಿಯನಿಗೆ ₹3 ಕೋಟಿ ಕೊಡಿಸಿದ್ದಾರೆ.
₹25 ಕೋಟಿ ಪಡೆದ ಆರೋಪಿ
ಈ ನಡುವೆ ಶ್ರೀಲಂಕಾದ ಆರ್ಥಿಕತೆ ಕುಸಿದು ಅರಾಜಕತೆ ಶುರುವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ರಾಹುಲ್ ತೋನ್ಸೆ, ವಿವೇಕ್ ನೀಡಿದ್ದ ₹3 ಕೋಟಿ ಪೈಕಿ ₹2 ಕೋಟಿ ವಾಪಾಸ್ ನೀಡಿ ಮತ್ತಷ್ಟು ನಂಬಿಕೆ ಗಟ್ಟಿಸಿದ್ದಾನೆ. ಕೆಲ ತಿಂಗಳ ಬಳಿಕ ಶ್ರೀಲಂಕಾದಲ್ಲಿ ಎಲ್ಲವೂ ಸರಿಯಾಗಿದೆ. ಹೂಡಿಕೆಗೆ ಇದು ಉತ್ತಮ ಸಮಯವಾಗಿದೆ. ನಿಮ್ಮ ಸ್ನೇಹಿತರ ಕಡೆಯಿಂದ ಹೂಡಿಕೆ ಮಾಡಿಸುವಂತೆ ದುಂಬಾಲು ಬಂದಿದ್ದಾನೆ. ಇವನ ಮಾತು ನಂಬಿದ ವಿವೇಕ್ ಮತ್ತು ಅವರ ಸ್ನೇಹಿತರಿಂದ ಹೂಡಿಕೆ ನೆಪದಲ್ಲಿ ವಿವಿಧ ಹಂತಗಳಲ್ಲಿ ಬರೋಬ್ಬರಿ ₹25 ಕೋಟಿ ಪಡೆದುಕೊಂಡಿದ್ದಾರೆ.
ಹಣ ವಾಪಾಸ್ ಕೇಳಿದ್ದಕ್ಕೆ ಬೆದರಿಕೆ
ಕೆಲ ತಿಂಗಳ ಬಳಿಕ ರಾಹುಲ್ ತೋನ್ಸೆ ಕುಟುಂಬದ ಬಗ್ಗೆ ವಿವೇಕ್‌ಗೆ ಅನುಮಾನ ಬಂದಿದ್ದು, ಹಣ ವಾಪಾಸ್ ನೀಡುವಂತೆ ಕೇಳಿದ್ದಾರೆ. ಆದರೆ, ಆರೋಪಿಗಳು ಒಂದೊಂದು ಕಾರಣ ಹೇಳಿಕೊಂಡು ಕೈಗೆ ಸಿಗದೇ ಓಡಾಡಿದ್ದಾರೆ. ಮತ್ತೆ ಸಂರ್ಪಕಕ್ಕೆ ಸಿಕ್ಕಾಗ ವಿವೇಕ್‌ಗೆ ಕರೆ ಮಾಡಿ ಹಣ ವಾಪಾಸ್ ಕೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಉದ್ಯಮಿ ವಿವೇಕ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್‌ನಲ್ಲಿ ರಾಹುಲ್
ವಂಚನೆ ಪ್ರಕರಣದ ಆರೋಪಿಗಳ ಪೈಕಿ ಆರೋಪಿ ರಾಹುಲ್ ತೋನ್ಸೆ ಹೆಸರು ಈ ಹಿಂದೆ ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್‌ನಲ್ಲಿ ಕೇಳಿ ಬಂದಿತ್ತು. ನಟಿ ಸಂಜನಾ ಗಲ್ರಾನಿ ಈತನ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ಸದ್ಯ ಆರೋಪಿ ರಾಹುಲ್ ತೋನ್ಸೆ ದುಬೈನಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆಯಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.