ಹಣ ದ್ವಿಗುಣಗೊಳಿಸುವುದಾಗಿ 25 ಜನರಿಗೆ ₹85 ಲಕ್ಷ ವಂಚನೆ : ಕೇಸ್‌ ದಾಖಲು

| N/A | Published : Apr 27 2025, 01:31 AM IST / Updated: Apr 27 2025, 04:22 AM IST

Money Horoscope

ಸಾರಾಂಶ

ಹಣ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಿ 25 ಮಂದಿಯಿಂದ ಸುಮಾರು ₹84.91 ಲಕ್ಷ ಪಡೆದು ಬಳಿಕ ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ   ಪ್ರಕರಣ  

  ಬೆಂಗಳೂರು :ಹಣ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಿ 25 ಮಂದಿಯಿಂದ ಸುಮಾರು ₹84.91 ಲಕ್ಷ ಪಡೆದು ಬಳಿಕ ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ ಉತ್ತರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಸರಘಟ್ಟ ಮುಖ್ಯರಸ್ತೆ ಎಜಿಬಿ ಲೇಔಟ್‌ ನಿವಾಸಿ ಅಶೋಕ್‌ ಆರ್‌.ಚಂದನರ ಎಂಬುವವರು ನೀಡಿದ ದೂರಿನ ಮೇರೆಗೆ ಪರಂ ಸಕ್ಲೇಜಾ ಮತ್ತು ಲತಾ ಎಂಬುವವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್‌ಎಸ್‌ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣದ ವಿವರ:

ದೂರುದಾರ ಅಶೋಕ್‌ ಅವರು ಶ್ರೀ ಗುರು ಮಾರ್ಕೆಟಿಂಗ್‌ ಆಫೀಸ್‌ನಲ್ಲಿ ಸೇಲ್ಸ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಮಾ.1ರಂದು ಆರೋಪಿಗಳಾದ ಪರಂ ಸಕ್ಲೇಜಾ ಮತ್ತು ಲತಾ ಪರಿಚಯವಾಗಿದೆ. ಈ ವೇಳೆ ಹಣ ದ್ವಿಗುಣ ಗೊಳಿಸುವುದಾಗಿ ಎಸ್‌ಜಿಆರ್‌ಇ ಎಂಬ ಕಂಪನಿ ಬಗ್ಗೆ ಅಶೋಕ್‌ಗೆ ತಿಳಿಸಿದ್ದಾರೆ. ಹಣ ಹೂಡಿಕೆ ಮಾಡಿಸಿದರೆ ತಿಂಗಳ ಸಂಬಳದ ಜತೆಗೆ ಕಮಿಷನ್‌ ನೀಡುವುದಾಗಿ ಆಮಿಷವೊಡ್ಡಿದ್ದಾರೆ.

ಇದಕ್ಕೆ ಅಶೋಕ್‌ ಒಪ್ಪಿದ ಬಳಿಕ ಆರೋಪಿಗಳು ಸ್ಕೀಮ್‌ಗಳ ವಿವರ ನೀಡಿದ್ದಾರೆ. ಎಸ್‌ಜಿಆರ್‌ಇ ಕಂಪನಿ ಹೆಸರಿನಲ್ಲಿ ನಕಲಿ ಗ್ರೂಪ್‌ ಕ್ರಿಯೇಟ್ ಮಾಡಿದ್ದಾರೆ. ಅದರಂತೆ ಅಶೋಕ್‌ ತನ್ನ ಸ್ನೇಹಿತರು, ಸಹೋದ್ಯೋಗಿಗಳು, ಪರಿಚಿತರಿಗೆ ಹಣ ದ್ವಿಗುಣದ ಸ್ಕೀಂಗಳ ಬಗ್ಗೆ ವಿವರಿಸಿ ಸುಮಾರು 25 ಜನರಿಂದ ಸುಮಾರು ₹84.91 ಲಕ್ಷ ಸಂಗ್ರಹಿಸಿ, ನಗದು ರೂಪದಲ್ಲಿ ಆರೋಪಿಗಳಿಗೆ ನೀಡಿದ್ದಾರೆ. ಹಣ ಪಡೆದ ಬಳಿಕ ಆರೋಪಿಗಳು ಯಾವುದೇ ಹಣ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.