ಬೆಂಗಳೂರು: ಅಜ್ಜಿ ಮನೆ ಅಡವಿಟ್ಟು ₹3.85 ಕೋಟಿ ವಂಚನೆ

| Published : Jan 20 2024, 02:05 AM IST / Updated: Jan 20 2024, 03:18 PM IST

home loan

ಸಾರಾಂಶ

ಅಜ್ಜಿ ಮನೆ ಅಡವಿಟ್ಟು ₹3.85 ಕೋಟಿ ವಂಚನೆ; ನಾಲ್ವರು ಬ್ಯಾಂಕರ್ಸ್‌ ಸೆರೆ!ನಕಲಿ ದಾಖಲೆ ಸೃಷ್ಟಿಸಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ಗಳಲ್ಲಿ ಅಡ, ಯಾಮಾರಿಸಲೆಂದೇ ಪರಿಶೀಲಿಸದೆ ಸಾಲ ಮಂಜೂರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಕಲಿ ದಾಖಲೆ ಸೃಷ್ಟಿಸಿ ವೃದ್ಧೆಯೊಬ್ಬರಿಗೆ ಸೇರಿದ ಮನೆಯನ್ನು ಅಕ್ರಮವಾಗಿ ಬ್ಯಾಂಕ್‌ಗಳಲ್ಲಿ ಅಡಮಾನವಿರಿಸಿ 3.85 ಕೋಟಿ ರು. ಸಾಲ ಪಡೆದು ವಂಚಿಸಿದ ಪ್ರಕರಣ ಸಂಬಂಧ ನಾಲ್ಕು ಪ್ರತ್ಯೇಕ ಬ್ಯಾಂಕ್‌ಗಳ ನಾಲ್ವರು ಅಧಿಕಾರಿಗಳನ್ನು ಸಿಸಿಬಿ ಬಂಧಿಸಿದೆ.

ಸೆಂಟ್ ಮಾರ್ಕ್ಸ್‌ ರಸ್ತೆಯ ಎಸ್‌ಬಿಐ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಮುರಳೀಧರ್, ಮಹಾಲಕ್ಷ್ಮೀ ಲೇಔಟ್‌ನ ಐಸಿಐಸಿಐ ಬ್ಯಾಂಕ್‌ನ ಅಧಿಕಾರಿ ರಾಕೇಶ್‌, ಹೊಸಕೋಟೆಯ ಬೆಂಗಳೂರು ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ಮಲ್ಲಿಕಾರ್ಜುನ್‌ ಹಾಗೂ ಜಯನಗರದ ಅಪೆಕ್ಸ್‌ ಸಹಕಾರಿ ಬ್ಯಾಂಕ್‌ನ ಅಧಿಕಾರಿ ಶಶಿಕಾಂತ್ ಬಂಧಿತರು.

ಸಾಲ ಪಡೆಯಲು ವಂಚಕರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸದೆ ಎಸ್‌ಬಿಐ ಹಾಗೂ ಐಸಿಐಸಿಐ ಬ್ಯಾಂಕ್‌ನ ಅಧಿಕಾರಿಗಳು ಸಾಲ ಮಂಜೂರು ಮಾಡಿದ್ದರು. 

ತಮ್ಮ ಬ್ಯಾಂಕ್‌ಗಳಲ್ಲಿ ಕೆವೈಸಿ ಪರಿಶೀಲಿಸದೆ, ನಕಲಿ ಖಾತೆ ತೆರೆಯಲು ವಂಚಕರಿಗೆ ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ಅಧಿಕಾರಿಗಳು ನೆರವಾಗಿದ್ದರು. 

ಈ ಬಗ್ಗೆ ವಿಚಾರಣೆ ವೇಳೆ ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಏನಿದು ಪ್ರಕರಣ?
ಜೆ.ಪಿ.ನಗರ 6ನೇ ಹಂತದಲ್ಲಿ 1350 ಚದರಡಿ ವಿಸ್ತೀರ್ಣದ ನಿವೇಶನದಲ್ಲಿ ಡ್ಯೂಪ್ಲೆಕ್ಸ್‌ ಮನೆ ಕಟ್ಟಿಸಿಕೊಂಡು ಒಂಟಿಯಾಗಿ ಅಂಬುಜಾಕ್ಷಿ ನೆಲೆಸಿದ್ದಾರೆ. ತಮ್ಮ ಮನೆಯನ್ನು ಮಾರಾಟ ಮಾಡಿ ವಿದೇಶದಲ್ಲಿರುವ ಮಗನೊಟ್ಟಿಗೆ ನೆಲೆ ನಿಲ್ಲಲು ಅವರು ಯೋಜಿಸಿದ್ದರು. 

ಈ ಮನೆ ಮಾರಾಟ ಸಂಗತಿ ತಿಳಿದು ಅಂಬುಜಾಕ್ಷಿ ಅವರಿಗೆ ವಂಚಿಸಿದ ಆರೋಪಿಗಳು, ಅವರ ಮನೆಯನ್ನು ಅಕ್ರಮವಾಗಿ ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಸಾಲ ಪಡೆದಿದ್ದರು.

ಈ ಬಗ್ಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ ಅಧಿಕಾರಿಗಳು, ತನಿಖೆ ಮುಂದುವರೆಸಿದಾಗ ನಾಲ್ವರು ಬ್ಯಾಂಕ್ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.

ರಾಕ್‌ಲೈನ್‌ ಪುತ್ರನಿಗೆ ಟೋಪಿ!
ಬ್ಯಾಂಕ್‌ನಲ್ಲಿ 1.25 ಕೋಟಿ ರು. ಸಾಲ ಕೊಡಿಸುವ ನೆಪದಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್ ಪುತ್ರ ಡಾ.ಅಭಿಲಾಷ್ ಅವರಿಗೂ ಇದೇ ವಂಚಕರು ಟೋಪಿ ಹಾಕಿದ್ದ ಸಂಗತಿ ಸಿಸಿಬಿ ತನಿಖೆಯಲ್ಲಿ ಪತ್ತೆಯಾಗಿದೆ.

ಈ ಪ್ರಕರಣ ಸಂಬಂಧ ಅಭಿಲಾಷ್ ಅವರನ್ನು ಸಿಸಿಬಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿತ್ತು. ಆದರೆ ತನಿಖೆಯಲ್ಲಿ ಅಭಿಲಾಷ್ ಹಾಗೂ ಆರೋಪಿಗಳ ನಂಟಿನ ಬಗ್ಗೆ ತನಿಖೆ ನಡೆಸಿದಾಗ ಮೋಸ ಹೋಗಿರುವ ವಿಷಯ ಗೊತ್ತಾಯಿತು. 

ಅಭಿಲಾಷ್‌ ನಂತೆಯೇ ಖಾಸಗಿ ಕಂಪನಿ ಉದ್ಯೋಗಿ ಪ್ರಶಾಂತ್ ಅವರಿಗೂ ಆರೋಪಿಗಳು ವಂಚಿಸಿದ್ದರು ಎಂದು ಮೂಲಗಳು ಹೇಳಿವೆ.

ಈ ಆರೋಪಿಗಳ ಪೈಕಿ ದಿಲೀಪ್ ಎಂಬಾತನ ಮೂಲಕ ಇತರ ಆರೋಪಿಗಳಿಗೆ ಅಭಿಲಾಷ್ ಪರಿಚಯವಾಗಿದೆ. ಬಳಿಕ ಅಂಬುಜಾಕ್ಷಿ ಅವರ ಮನೆ ಅಡಮಾನವಿರಿಸಿ ಪಡೆದ ಸಾಲದಲ್ಲಿ ಅಭಿಲಾಷ್ ಒಡೆತನದ ಗೋ ಗ್ರೀನ್ ಹೆಸರಿನ ಕಂಪನಿಗೆ 1.2 ಕೋಟಿ ರು. 

ಸಂದಾಯ ಮಾಡಿದ್ದರು. ಆದರೆ ಅಡಮಾನವಿರಿಸಿದ್ದ ಆಸ್ತಿಯ ಬಗ್ಗೆ ಅಭಿಲಾಷ್‌ಗೆ ಆರೋಪಿಗಳು ಮಾಹಿತಿ ನೀಡಿರಲಿಲ್ಲ. ಇದಕ್ಕೆ ಪ್ರತಿಯಾಗಿ 25 ಲಕ್ಷ ರು. ಅನ್ನು ಕಮಿಷನ್ ರೂಪದಲ್ಲಿ ಪಡೆದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಂದೆ ಕಟ್ಟುನಿಟ್ಟು ತಂದ ಕಷ್ಟ!
ತಮ್ಮ ತಂದೆಯ ನೆರವಿಲ್ಲದೆ ಸ್ವತಂತ್ರವಾಗಿ ಬ್ಯುಸಿನೆಸ್ ನಡೆಸಲು ಮುಂದಾಗಿ ವಂಚಕರ ಬಲೆಗೆ ಅಭಿಲಾಷ್ ಬಿದ್ದಿದ್ದರು ಎನ್ನಲಾಗಿದೆ. 

ಹಣಕಾಸು ವಿಚಾರದಲ್ಲಿ ರಾಕ್‌ಲೈನ್‌ ವೆಂಕಟೇಶ್ ಅವರು ಶಿಸ್ತಿನ ಮನುಷ್ಯರಾಗಿದ್ದು, ಪ್ರತಿ ಪೈಸೆಗೂ ಲೆಕ್ಕಾಚಾರ ಮಾಡುತ್ತಾರೆ. 

ಹೀಗಾಗಿ ತಮ್ಮ ಉದ್ದಿಮೆಗೆ ತಂದೆ ನಿರೀಕ್ಷಿತ ಪ್ರಮಾಣದ ಆರ್ಥಿಕ ನೆರವು ಸಿಗದೆ ಬೇರೆ ಮೂಲಗಳಿಂದ ಸಾಲ ಪಡೆಯಲು ಅಭಿಲಾಷ್ ಯತ್ನಿಸಿದ್ದರು. ಆಗ ಅವರಿಗೆ ಆರೋಪಿಗಳ ಸಂಪರ್ಕವಾಗಿದೆ ಎಂದು ಮೂಲಗಳು ತಿಳಿಸಿವೆ.