ಹೊಸ ವರ್ಷಕ್ಕೆ ಸಂಗ್ರಹಿಸಿದ್ದ 3 ಕೋಟಿ ರು. ಡ್ರಗ್ಸ್‌ ಜಪ್ತಿ : ಪೊಲೀಸರ ಕಾರ್ಯಾಚರಣೆ ಚುರುಕು

| Published : Nov 23 2024, 12:32 AM IST / Updated: Nov 23 2024, 04:25 AM IST

ಸಾರಾಂಶ

ಹೊಸ ವರ್ಷ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಧಾನಿಯ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದ್ದು, ಮತ್ತೆ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿ ₹3 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಹಾಗೂ ಗೋವಿಂದಪುರ ಠಾಣೆ ಪೊಲೀಸರು ಪ್ರತ್ಯೇಕವಾಗಿ ಜಪ್ತಿ ಮಾಡಿದ್ದಾರೆ.

  ಬೆಂಗಳೂರು : ಹೊಸ ವರ್ಷ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಧಾನಿಯ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದ್ದು, ಮತ್ತೆ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿ ₹3 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಹಾಗೂ ಗೋವಿಂದಪುರ ಠಾಣೆ ಪೊಲೀಸರು ಪ್ರತ್ಯೇಕವಾಗಿ ಜಪ್ತಿ ಮಾಡಿದ್ದಾರೆ.

ಹೆಸರಘಟ್ಟ ಸಮೀಪದ ಪುಟ್ಟಸ್ವಾಮಿ ಲೇಔಟ್ ನಿವಾಸಿಗಳಾದ ಮೈಕಲ್‌ ಇವ್ಗಾಬರೆ ಹಾಗೂ ಆಗ್ವು ಈಜೆಕಿಲ್‌ ಓಸಿಟಾ ಬಂಧಿತರಾಗಿದ್ದಾರೆ. ಆರೋಪಿಗಳಿಂದ 318 ಗ್ರಾಂ ಗಾಂಜಾ, 1.530 ಕೇಜಿ ಎಂಡಿಎಂಎ ಕ್ರಿಸ್ಟಲ್, 202 ಗ್ರಾಂ ಕೊಕೇನ್‌, 23 ಎಂಡಿಎಂಎ ಎಕ್ಸೆಟೆಸಿ ಪಿಲ್ಸ್‌ಗಳು, ಕಾರು ಹಾಗೂ ಮೊಬೈಲ್ ಸೇರಿ ₹3 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ.

ಹೊಸ ವರ್ಷಾಚರಣೆ ಸನಿಹ ಹಿನ್ನೆಲೆಯಲ್ಲಿ ಪಾರ್ಟಿಗಳಿಗೆ ಪೂರೈಸಲು ಡ್ರಗ್ಸ್ ಸಂಗ್ರಹಕ್ಕೆ ಪೆಡ್ಲರ್‌ಗಳು ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಹಾಗೂ ಗೋವಿಂದಪುರ ಪೊಲೀಸರು ದಾಳಿ ನಡೆಸಿದ್ದಾರೆ.

ಮೆಡಿಕಲ್ ವೀಸಾದಲ್ಲಿ ಬಂದು ದಂಧೆ:

ಒಟಾಸಿ ಹಾಗೂ ಮೈಕೆಲ್‌ ಮೂಲತಃ ನೈಜೀರಿಯಾ ದೇಶದವರಾಗಿದ್ದು, ಹಲವು ದಿನಗಳಿಂದ ಪುಟ್ಟಸ್ವಾಮಿ ಲೇಔಟ್‌ನಲ್ಲಿ ವಾಸವಾಗಿದ್ದರು. ಹೆಸರಘಟ್ಟದ ತಮ್ಮ ಮನೆಯಲ್ಲಿ ಕೊಕೇನ್ ಹಾಗೂ ಎಂಡಿಎಂಎ ಡ್ರಗ್ಸ್ ಸಂಗ್ರಹಿಸಿಟ್ಟು ವಿದೇಶಿ ಪೆಡ್ಲೆರ್‌ಗಳು ಮಾರಾಟದಲ್ಲಿ ನಿರತರಾಗಿರುವ ಬಗ್ಗೆ ಸಿಸಿಬಿ ಮಾದಕ ನಿಗ್ರಹ ದಳದ ಇನ್‌ಸ್ಪೆಕ್ಟರ್ ಭರತ್‌ಗೌಡ ಅವರಿಗೆ ಮಾಹಿತಿ ಸಿಕ್ಕಿತು. ಈ ಬಾತ್ಮೀಧಾರರ ಮಾಹಿತಿ ಆಧಾರಿಸಿ ತಕ್ಷಣವೇ ಕಾರ್ಯಾಚರಣೆ ಸಿಸಿಬಿ ತಂಡವು, ವಿದೇಶಿಯರ ಮನೆ ಮೇಲೆ ದಾಳಿ ನಡೆಸಿ ಮಾಲಿನ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐದು ವರ್ಷಗಳ ಹಿಂದೆ ವೈದ್ಯಕೀಯ ವೀಸಾದಡಿ ಭಾರತಕ್ಕೆ ಬಂದಿದ್ದ ಈ ವಿದೇಶಿಯರು, ಮುಂಬೈ, ದೆಹಲಿಯಲ್ಲಿ ನೆಲೆಸಿರುವ ಆಫ್ರಿಕಾ ಮೂಲದ ಪರಿಚಯಸ್ಥ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸಿ ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದರು. ತಲಾ ಗ್ರಾಂಗೆ ಕೊಕೇನ್ ಹಾಗೂ ಎಂಡಿಎಂಎ ಅನ್ನು 12 ರಿಂದ 15 ಸಾವಿರ ರುಪಾಯಿಗೆ ಆರೋಪಿಗಳು ಮಾರುತ್ತಿದ್ದರು. ಆರೋಪಿಗಳಿಂದ ₹3 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಾರ್ಟಿಗಳಿಗೆ ಪೂರೈಸಲು ಡ್ರಗ್ಸ್ ಸಂಗ್ರಹಕ್ಕೆ ಕೆಲವರು ಮುಂದಾಗಿರುವ ಬಗ್ಗೆ ಮಾಹಿತಿ ಇದ್ದು, ಡ್ರಗ್ಸ್ ಜಾಲದ ಮೇಲೆ ತೀವ್ರ ನಿಗಾವಹಿಸಲಾಗಿದೆ.

-ಬಿ.ದಯಾನಂದ್, ಪೊಲೀಸ್ ಆಯುಕ್ತ, ಬೆಂಗಳೂರು ನಗರ

ಕೇರಳ ಮೂಲಕ ನಗರಕ್ಕೆ ತಂದಿದ್ದ 3 ಕ್ವಿಂಟಾಲ್‌ ಗಾಂಜಾ ಜಪ್ತಿ: 3 ಸೆರೆ

ಜಕ್ಕೂರು ಸಮೀಪ ಡ್ರಗ್ಸ್‌ ದಂಧೆಕೋರರ ವಿರುದ್ಧ ಗೋವಿಂದಪುರ ಠಾಣೆ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ದಂಪತಿ ಸೇರಿ ಮೂವರು ಸಿಕ್ಕಿಬಿದ್ದಿದ್ದಾರೆ. ಈ ಮೂವರಿಂದ 3 ಕ್ವಿಂಟಾಲ್ ಗಾಂಜಾ ಜಪ್ತಿಯಾಗಿದೆ.

ಕೇರಳ ರಾಜ್ಯದ ಅಚ್ಚು ಸಂತೋಷ್‌, ಜಕ್ಕೂರು ಸಮೀಪದ ಶ್ರೀರಾಂಪುರದ ಜಮೀರ್ ಖಾನ್ ಹಾಗೂ ಆತನ ಪತ್ನಿ ರೇಷ್ಮಾ ಬಂಧಿತರು. ಕೇರಳದ ಅಚ್ಚು ಸಂತೋಷ್ ವೃತ್ತಿಪರ ಪೆಡ್ಲರ್‌ ಆಗಿದ್ದು, ಆತನ ಮೇಲೆ ಕೇರಳ ಹಾಗೂ ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಆತನ ಮೇಲೆ ಗೂಂಡಾ ಕಾಯ್ದೆಯಡಿ ಕೂಡ ಪ್ರಕರಣ ದಾಖಲಾಗಿತ್ತು.

 ಕೆಲ ದಿನಗಳ ಹಿಂದೆ ಆತನಿಗೆ ಕ್ಯಾಬ್ ಚಾಲಕ ಜಮೀರ್ ಪರಿಚಯವಾಗಿದೆ. ಆಗ ಆತನಿಗೆ ಹಣದಾಸು ತೋರಿಸಿ ಗಾಂಜಾ ಮಾರಾಟಕ್ಕೆ ದಂಧೆಗೆ ಸಂತೋಷ್ ಬಳಸಿಕೊಂಡಿದ್ದು. ಹಣದ ದುರಾಸೆಯಿಂದ ಜಮೀರ್ ಪತ್ನಿ ರೇಷ್ಮಾ ಕೂಡ ಕೃತ್ಯಕ್ಕೆ ಸಾಥ್ ಕೊಟ್ಟಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಒಡಿಶಾದ ಅರಣ್ಯದಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಬಳಿಕ ಅದನ್ನು ತನ್ನ ಕ್ಯಾಬ್‌ನಲ್ಲಿ ಕೇರಳ ಮೂಲಕ ಹೊಸಕೋಟೆಗೆ ಬಂದು ಅಲ್ಲಿಂದ ನಗರಕ್ಕೆ ಆರೋಪಿಗಳು ತರುತ್ತಿದ್ದರು. ನಗರದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಿ ಈ ಮೂವರು ಹಣ ಸಂಪಾದಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಇನ್‌ಸ್ಪೆಕ್ಟರ್ ಎಚ್‌.ಜಯರಾಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.