ಸೀಟ್ ಬ್ಲಾಕಿಂಗ್‌ ಆರೋಪ : 3 ವರ್ಷ ಹಂಚಿಕೆ ಆದ ಸೀಟು ಲೆಕ್ಕ ಕೊಡಿ - ಖಾಕಿ ಸೂಚನೆ

| Published : Dec 10 2024, 01:16 AM IST / Updated: Dec 10 2024, 05:42 AM IST

Advantages of Studying at Night

ಸಾರಾಂಶ

ಕಳೆದ 3 ವರ್ಷಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಲಭ್ಯವಾದ ಸೀಟುಗಳು ಹಾಗೂ ಅವುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಕುರಿತು ಮಾಹಿತಿ ನೀಡುವಂತೆ ಸೀಟ್ ಬ್ಲಾಕಿಂಗ್‌ ಆರೋಪ ಎದುರಿಸುತ್ತಿರುವ 3 ಪ್ರತಿಷ್ಠಿತ ಖಾಸಗಿ ಕಾಲೇಜುಗಳಿಗೆ ಮಲ್ಲೇಶ್ವರ ಠಾಣೆ ಪೊಲೀಸರು ಸೂಚಿಸಿದ್ದಾರೆ.

 ಬೆಂಗಳೂರು  : ಕಳೆದ 3 ವರ್ಷಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಲಭ್ಯವಾದ ಸೀಟುಗಳು ಹಾಗೂ ಅವುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಕುರಿತು ಮಾಹಿತಿ ನೀಡುವಂತೆ ಸೀಟ್ ಬ್ಲಾಕಿಂಗ್‌ ಆರೋಪ ಎದುರಿಸುತ್ತಿರುವ 3 ಪ್ರತಿಷ್ಠಿತ ಖಾಸಗಿ ಕಾಲೇಜುಗಳಿಗೆ ಮಲ್ಲೇಶ್ವರ ಠಾಣೆ ಪೊಲೀಸರು ಸೂಚಿಸಿದ್ದಾರೆ.

ನೋಟಿಸ್ ಹಿನ್ನಲೆ ತಮ್ಮ ಮುಂದೆ ವಿಚಾರಣೆಗೆ ಹಾಜರಾಗಿದ್ದ ಬಿಎಂಎಸ್‌, ನ್ಯೂ ಹಾರಿಜನ್ ಹಾಗೂ ಆಕಾಶ್ ಕಾಲೇಜುಗಳ ಆಡಳಿತ ಮಂಡಳಿಯ ಪ್ರತಿನಿಧಿಗಳಿಗೆ ಮಲ್ಲೇಶ್ವರ ಠಾಣೆ ಇನ್ಸ್‌ಪೆಕ್ಟರ್‌ ಜಗದೀಶ್‌ ಸೂಚಿಸಿದ್ದಾರೆ. ಈ ಕುರಿತು ಮಾಹಿತಿ ನೀಡಲು ತಮಗೆ ಕಾಲಾವಕಾಶ ನೀಡುವಂತೆ ಕಾಲೇಜಿನ ಆಡಳಿತ ಮಂಡಳಿಗಳು ಮನವಿ ಮಾಡಿವೆ. ಈ ಕೋರಿಕೆ ಸಮ್ಮತಿಸಿದ ಪೊಲೀಸರು, ವಾರದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಬಗ್ಗೆ ಮಾಹಿತಿ ನೀಡುವಂತೆ ಹೇಳಿದ್ದಾರೆ ಎನ್ನಲಾಗಿದೆ.

ಪ್ರಸಕ್ತ ಸಾಲಿನ ಸೀಟು ಬ್ಲ್ಯಾಕಿಂಗ್ ಕುರಿತು ಪ್ರಕರಣ ದಾಖಲಾಗಿದೆ. ಆದರೆ ಈ ವರ್ಷ ಇನ್ನು ಎರಡು-ಮೂರು ಹಂತದಲ್ಲಿ ಹಿಂತಿರುಗಿಸಿದ ಸೀಟುಗಳಲ್ಲಿ ಬಹುತೇಕ ಭರ್ತಿಯಾಗಿಲ್ಲ. ಹೀಗಾಗಿ ಕಾಲೇಜುಗಳಿಂದ 3 ವರ್ಷಗಳ ಸೀಟುಗಳ ಬಗ್ಗೆ ಮಾಹಿತಿ ಕೋರಿದ್ದೇವೆ. ಆ ವರದಿ ಶೋಧಿಸಿದಾಗ ಸೀಟ್‌ ಬ್ಲಾಕಿಂಗ್ ಜಾಲದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಬಹುದು. ಹಾಗೆಯೇ ಬಂಧಿತ ಆರೋಪಿಗಳ ಜೊತೆಗಿನ ಅಗೋಚರ ನಂಟಿನ ಬಗ್ಗೆ ಸಹ ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ನೋಟಿಸ್ ಹಿನ್ನಲೆ ಆ 3 ಕಾಲೇಜುಗಳ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿದ್ದರು. ಆದರೆ ವಿಚಾರಣೆ ತಾವು ಯಾವುದೇ ತಪ್ಪು ಮಾಡಿಲ್ಲ. ಕಾನೂನು ಬದ್ಧವಾಗಿ ಸರ್ಕಾರದಿಂದ ಮಂಜೂರಾದ ಸೀಟುಗಳನ್ನು ಮಾತ್ರ ಭರ್ತಿ ಮಾಡಿಕೊಂಡಿದ್ದೇವೆ ಎಂದು ಆರೋಪಿತ ಕಾಲೇಜುಗಳ ಪ್ರತಿನಿಧಿಗಳು ಸ್ಪಷ್ಟನೆ ನೀಡಿದ್ದರು. ಆದರೆ ನಮಗೆ ಅವರ ಸ್ಪಷ್ಟನೆ ಮೇಲೆ ನಂಬಿಕೆ ಬಂದಿಲ್ಲ. ಹೀಗಾಗಿ 3 ವರ್ಷಗಳಲ್ಲಿ ಕೆಇಎನಿಂದ ಲಭ್ಯವಾದ ಸೀಟುಗಳು ಹಾಗೂ ಪ್ರವೇಶ ಪಡೆದ ವಿದ್ಯಾರ್ಥಿಗಳ ಬಗ್ಗೆ ವಿವರ ನೀಡುವಂತೆ ಸೂಚಿಸಿ ಕಳುಹಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಎಐ ಸೇರಿ ಬಹುಬೇಡಿಕೆಯ ಕೋರ್ಸ್‌ಗಳ ಸುಮಾರು 2 ಸಾವಿರಕ್ಕೂ ಅಧಿಕ ಸೀಟುಗಳನ್ನೇ ವಿದ್ಯಾರ್ಥಿಗಳು ಹಿಂತಿರುಗಿಸಿದ್ದರು. ಆದರೆ ವಿದ್ಯಾರ್ಥಿಗಳ ಲಾಗಿನ್‌ ಹಾಗೂ ಪಾಸ್‌ವರ್ಡ್‌ಗಳನ್ನು ಕೆಇಎ ನೌಕರನಿಂದ ಪಡೆದು ಆ ವಿದ್ಯಾರ್ಥಿಗಳ ಹೆಸರಿನಲ್ಲಿ ಆರೋಪಿಗಳು ಸೀಟು ಬ್ಲಾಕಿಂಗ್ ಮಾಡಿದ್ದರು. ಈ ಪ್ರಕರಣದ ಬಂಧಿತ ಆರೋಪಿಗಳ ವಿಚಾರಣೆಗೆ 3 ಕಾಲೇಜುಗಳ ಬಗ್ಗೆ ಮಾಹಿತಿ ಸಿಕ್ಕಿತು. ಈ ಹಿನ್ನಲೆ ನ್ಯೂ ಹಾರಿಜನ್, ಆಕಾಶ್ ಹಾಗೂ ಬಸನವಗುಡಿಯ ಬಿಎಂಎಸ್‌ ಕಾಲೇಜಿಗೆ ನೋಟಿಸ್ ನೀಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.