ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಇಬ್ಬರು ಯುವತಿಯರು ನಡೆದುಕೊಂಡು ಹೋಗುವಾಗ ಹಿಂಬಾಲಿಸಿ ಬಂದು ಯುವತಿಯನ್ನು ತಬ್ಬಿ ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಕಾಮುಕನಿಗಾಗಿ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.ಕಾಮುಕನ ಬಂಧನಕಕ್ಕೆ ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಾಮುಕನ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಪೊಲೀಸರು ಕಾಮುಕನ ಚಲವಲನ ಸೆರೆಯಾಗಿರುವ ಮತ್ತಷ್ಟು ಸಿಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಆತನ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಸಂತ್ರಸ್ತೆಯ ಪತ್ತೆಗೂ ಶೋಧ:ಮತ್ತೊಂದೆಡೆ ಈವರೆಗೂ ಸಂತ್ರಸ್ತೆಯ ಸುಳಿವು ಪತ್ತೆಯಾಗಿಲ್ಲ. ಘಟನೆ ಸಂಬಂಧ ಸಂತ್ರಸ್ತೆ ಈವರೆಗೂ ಯಾವುದೇ ದೂರು ದಾಖಲಿಸಿಲ್ಲ. ಹೀಗಾಗಿ ಪೊಲೀಸರು ಸಂತ್ರಸ್ತೆ ಪತ್ತೆಗೂ ಶೋಧ ಕಾರ್ಯ ಕೈಗೊಂಡಿದ್ದಾರೆ. ಘಟನೆ ಸಂಬಂಧ ಸ್ಥಳೀಯ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾಮುಕನ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಪ್ರಕರಣದ ಹಿನ್ನೆಲೆ:ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ಏ.3ರ ಮುಂಜಾನೆ ಸುಮಾರು 1.55ಕ್ಕೆ ಇಬ್ಬರು ಯುವತಿಯರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಏಕಾಏಕಿ ಓರ್ವ ಯುವತಿಯನ್ನು ಹಿಡಿದುಕೊಂಡು ಗೋಡೆಗೆ ಒರಗಿಸಿ ಖಾಸಗಿ ಅಂಗಾಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಈ ವೇಳೆ ಆ ಯುವತಿಯರು ಜೋರಾಗಿ ಕಿರುಚಿದ ಪರಿಣಾಮ ಆತ ಪರಾರಿಯಾಗಿದ್ದ. ಈ ಸಂಬಂಧ ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
*ಮಧ್ಯರಾತ್ರಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರು*ಏಕಾಏಕಿ ಬಂದು ಒಬ್ಬ ಯುವತಿಯನ್ನು ಹಿಡಿದು ಕಿರುಕುಳ
*ಸ್ಥಳೀಯ ವ್ಯಕ್ತಿಯಿಂದ ಪೊಲೀಸರಿಗೆ ದೂರು, ತನಿಖೆ ಶುರು
*ಕಾಮುಕನ ಮತ್ತಷ್ಟು ಸಿಸಿ ದೃಶ್ಯ ಸಂಗ್ರಹಿಸಿ ಪತ್ತೆಗೆ ಯತ್ನ
*ಇತ್ತ ಕಿರುಕುಳಕ್ಕೆ ಒಳಗಾದ ಯುವತಿಯ ಪತ್ತೆಗೂ ಕ್ರಮ