ಖಾಸಗಿ ಕಾಲೇಜಿನ ಹಳೇಯ 5 ವಾಹನಗಳು ಬೆಂಕಿಗಾಹುತಿ

| Published : Jun 30 2024, 02:05 AM IST / Updated: Jun 30 2024, 05:39 AM IST

ಸಾರಾಂಶ

ಬೆಂಗಳೂರಿನ ಹೆಗ್ಗನಹಳ್ಳಿ ಕ್ರಾಸ್‌ನ ಕೆಟಿಜಿ ನರ್ಸಿಂಗ್‌ ಕಾಲೇಜು ಆವರಣದಲ್ಲಿ ಆಕಸ್ಮಿಕ ಬೆಂಕಿಗೆ 5 ಬಸ್‌ಗಳು ಸುಟ್ಟು ಭಸ್ಮ ಆಗಿವೆ.

  ಬೆಂಗಳೂರು : ಖಾಸಗಿ ನರ್ಸಿಂಗ್‌ ಕಾಲೇಜೊಂದರ ಆವರಣದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಐದು ಹಳೇಯ ವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

ಹೆಗ್ಗನಹಳ್ಳಿ ಕ್ರಾಸ್‌ನ ಕೆಟಿಜಿ ನರ್ಸಿಂಗ್‌ ಕಾಲೇಜು ಆವರಣದಲ್ಲಿ ಶನಿವಾರ ಮಧ್ಯಾಹ್ನ ಸುಮಾರು 2.30ಕ್ಕೆ ಈ ಘಟನೆ ನಡೆದಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಸಂಚಾರ ಸ್ಥಗಿತಗೊಳಿಸಿದ್ದ ಐದು ಕಾಲೇಜು ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿ ಹದಿನೈದು ವರ್ಷ ಸಂಚಾರ ಪೂರೈಸಿದ ಆರು ವಾಹನಗಳನ್ನು ಕಾಲೇಜಿನ ಆವರಣದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದರು. ಮಧ್ಯಾಹ್ನ ಒಂದು ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣದಲ್ಲಿ ಪಕ್ಕದ ವಾಹನಗಳಿಗೂ ಬೆಂಕಿ ಆವರಿಸಿ ಹೊತ್ತಿ ಉರಿಯಲು ಆರಂಭಿಸಿವೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಹಾಗೂ ರಾಜಗೋಪಾಲನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೂರು ಅಗ್ನಿಶಾಮಕ ವಾಹನಗಳೊಂದಿಗೆ ಸುಮಾರು ಎರಡು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಳೇಯ ಕಾಲೇಜು ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ವಾಹನಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ಹಲವು ದಿನಗಳಿಂದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದರು. ಘಟನೆಯಲ್ಲಿ ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.