ಚಿತ್ರದುರ್ಗ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ : ಸಾವು ನಿಗೂಢ

| Published : Dec 30 2023, 01:16 AM IST / Updated: Dec 30 2023, 10:37 AM IST

ಸಾರಾಂಶ

ಚಿತ್ರದುರ್ಗ ನಗರದ ಹೊರವಲಯದ ನಿವೃತ್ತ ಎಂಜಿನಿಯರ್‌ವೊಬ್ಬರ ಮನೆಯಲ್ಲಿ ಒಟ್ಟು ಐದು ಅಸ್ಥಿಪಂಜರಗಳು ಪತ್ತೆಯಾಗಿದ್ದು, ಅಚ್ಚರಿ, ಆತಂಕ ಮೂಡಿಸಿದೆ. ಮೂರ್ನಾಲ್ಕು ವರ್ಷಗಳ ಹಿಂದೆಯೇ ಐವರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಗರದ ಹೊರವಲಯದ ಜೈಲ್ ರಸ್ತೆಯಲ್ಲಿರುವ ನಿವೃತ್ತ ಎಂಜಿನಿಯರ್‌ ವೊಬ್ಬರ ಮನೆಯಲ್ಲಿ ಒಟ್ಟು ಐದು ಅಸ್ಥಿಪಂಜರಗಳು ಪತ್ತೆಯಾಗಿದ್ದು, ಅಚ್ಚರಿ ಮತ್ತು ಆತಂಕ ಮೂಡಿಸಿದೆ. ಮನೆಯಲ್ಲಿ ಸಿಕ್ಕ ಈ ಅಸ್ಥಿಪಂಜರಗಳು ಮನೆ ಮಾಲೀಕ ಜಗನ್ನಾಥ್‌ ರೆಡ್ಡಿ, ಮತ್ತವರ ಕುಟುಂಬ ಸದಸ್ಯರದ್ದು ಎಂದು ಹೇಳಲಾಗುತ್ತಿದೆ. ಮೂರ್ನಾಲ್ಕು ವರ್ಷಗಳ ಹಿಂದೆಯೇ ಐವರೂ ಮೃತಪಟ್ಟಿರುವ ಶಂಕೆ ಇದ್ದು ಸಂಬಂಧಿಕರಿಗಾಗಲಿ, ಅಕ್ಕಪಕ್ಕದ ನಿವಾಸಿಗಳಿಗಾಗಲಿ ಈ ಕುರಿತು ಇಷ್ಟು ದಿನ ಸಣ್ಣ ಅನುಮಾನವೂ ಬಾರದೇ ಇದ್ದುದ್ದು ಅಚ್ಚರಿ ಮೂಡಿಸಿದೆ.

ಗುರುವಾರ ಸಂಜೆಯಷ್ಟೇ ಪೊಲೀಸರು ಮನೆ ಪರಿಶೀಲಿಸಿದಾಗ ಮೂವರ ಅಸ್ಥಿಪಂಜರ ಪತ್ತೆಯಾಗಿತ್ತು. ಮತ್ತಷ್ಟು ಪರಿಶೀಲನೆ ಬಳಿಕ ಇನ್ನೆರಡು ಅಸ್ಥಿಪಂಜರ ಸಿಕ್ಕಿವೆ. ಇವು ಜಗನ್ನಾಥರೆಡ್ಡಿ, ಪತ್ನಿ ಪ್ರೇಮ, ಮೊದಲ ಪುತ್ರ ಕೃಷ್ಣ ರೆಡ್ಡಿ, ಮಗಳು ತ್ರಿವೇಣಿ ಹಾಗೂ ಕೊನೇ ಪುತ್ರ ನರೇಂದ್ರರೆಡ್ಡಿ ಅವರದ್ದು ಎಂದು ಹೇಳಲಾಗುತ್ತಿದೆ.

ತುಮಕೂರಲ್ಲಿ ಎಂಜಿನಿಯರ್: ಜಗನ್ನಾಥ ರೆಡ್ಡಿ ತುಮಕೂರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್‌ ಆಗಿದ್ದರು. ನಿವೃತ್ತಿ ನಂತರ ಚಿತ್ರದುರ್ಗದಲ್ಲಿ ನೆಲೆಸಿದ್ದರು. ಮೂರು ಮಕ್ಕಳಲ್ಲಿ ಇಬ್ಬರಿಗೆ ಮದುವೆಯಾಗಿಲ್ಲದ ಕಾರಣ ಜಗನ್ನಾಥ ರೆಡ್ಡಿ ಅವರು ಖಿನ್ನತೆಗೆ ಜಾರಿದ್ದರು ಎನ್ನಲಾಗಿದೆ.

ದರೋಡೆ ಕೇಸಲ್ಲಿ ಬಂಧನ: ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದು, ಆತನ ಮೇಲೆ 2013ರಲ್ಲಿ ಬಿಡದಿ ಬಳಿ ವಾಹನ ತಡೆದು ದರೋಡೆ ನಡೆಸಿದ ಕೇಸ್ ದಾಖಲಾಗಿತ್ತು. ಗೆಳೆಯರ ಜತೆ ತೆರಳಿ ದರೋಡೆ ಕೇಸಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ 15 ದಿನ ಜೈಲು ಪಾಲಾಗಿದ್ದ, ಈ ಕಾರಣಕ್ಕೆ ಜಗನ್ನಾಥರೆಡ್ಡಿ ತೀವ್ರ ನೊಂದಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಕೋವಿಡ್‌ ಸಮಯದಲ್ಲಿ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ಇದೆ. ಮನೆ ಪರಿಶೀಲಿಸಿದಾಗ ಅಲ್ಲಿ ಚೀಟಿಯೊಂದು ಪತ್ತೆಯಾಗಿದ್ದು, ಅದು ಡೆತ್‌ನೋಟೇ ಅಥವಾ ಬೇರೆ ಚೀಟಿಯೇ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ.

8 ವರ್ಷದ ಹಿಂದೆ ಬಂದಿದ್ದೆ: ಮಾಧ್ಯಮದವರೊಂದಿಗೆ ಮಾತನಾಡಿದ ಜಗನ್ನಾಥ್ ರೆಡ್ಡಿ ಪತ್ನಿ ಪ್ರೇಮ ಅವರ ಸಹೋದರಿ ಲಲಿತಮ್ಮ, ಎಂಟು ವರ್ಷದ ಹಿಂದೆ ನಾನು ಇಲ್ಲಿಗೆ ಬಂದಿದ್ದೆ. ಮನೆಗೆ ಬಂದಾಗೆಲ್ಲ ಮಾವ ಜಗನ್ನಾಥ್ ರೆಡ್ಡಿ ತಮ್ಮ ಮಕ್ಕಳಿಗೆ ಮದುವೆ ಆಗಿಲ್ಲ ಎಂಬ ನೋವು ತೋಡಿಕೊಳ್ಳುತ್ತಿದ್ದರು. ಮಕ್ಕಳ ಮದುವೆ ವಿಚಾರದಿಂದ ಅವರು ತೀವ್ರ ಖಿನ್ನತೆಗೆ ಒಳಪಟ್ಟಿದ್ದರು.‌ ಇಬ್ಬರು ಗಂಡು ಮಕ್ಕಳಿಗೆ ಮದುವೆ ಮಾಡಿರಲಿಲ್ಲ. ಒಬ್ಬ ಮಗಳು ಬೋನ್ ಮ್ಯಾರೋ ಕಾಯಿಲೆಯಿಂದ ಬಳಲುತ್ತಿದ್ದಳು ಎಂದು ಮಾಹಿತಿ ನೀಡಿದ್ದಾರೆ.

ವಿದ್ಯುತ್‌ ಸಂಪರ್ಕ ಕಡಿತ: ಜಗನ್ನಾಥ ರೆಡ್ಡಿ 2019ರ ಜನವರಿಯಲ್ಲಿ ಕೊನೆಯದಾಗಿ ತಮ್ಮ ಮನೆಯ ವಿದ್ಯುತ್ ಬಿಲ್ ಪಾವತಿ ಮಾಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಹಣ ಪಾವತಿಸಿಲ್ಲ. ₹2,850 ವಿದ್ಯುತ್ ಬಿಲ್ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ನಿವೃತ್ತ ಎಂಜಿನಿಯರ್ ಪೆನ್ಷನ್ ಹಣಕ್ಕಾಗಿ ಪ್ರತಿ ವರ್ಷ ದಾಖಲೆ ಸಲ್ಲಿಸುತ್ತಾರೆ. ಹೀಗಾಗಿ ಯಾವ ವರ್ಷದಿಂದ ಸಲ್ಲಿಸಿಲ್ಲ ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅದು ಸಿಕ್ಕಲ್ಲಿ ಜಗನ್ನಾಥರೆಡ್ಡಿ ಮೃತಪಟ್ಟು ಎಷ್ಟು ವರ್ಷಗಳಾಗಿರಬಹುದೆಂಬ ಬಗ್ಗೆ ಖಚಿತತೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ತನಿಖೆ ಬಳಿಕ ಅಸ್ಥಿಪಂಜರದ ಗುರುತು ಪತ್ತೆ: ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಧರ್ಮೇಂದರ್ ಕುಮಾರ್ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮನೆಯಲ್ಲಿ ತುಂಬಾ ವಾಸನೆ ಬರುತ್ತಿದೆ. ಎಫ್‌ಎಸ್‌ಎಲ್ ತಂಡ, ವೈದ್ಯರು, ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಸದ್ಯ ಮನೆಯಲ್ಲಿ ಸಿಕ್ಕ ಐದು ಅಸ್ಥಿಪಂಜರಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೂರ್ಣ ಪ್ರಮಾಣದ ತನಿಖೆ ಬಳಿಕವಷ್ಟೇ ಈ ಅಸ್ಥಿಪಂಜರ ಯಾರದ್ದು ಮತ್ತು ಸಾವು ಹೇಗಾಯಿತು ಎಂಬ ವಿಚಾರ ಬಯಲಿಗೆ ಬರಲಿದೆ ಎಂದರು.

ಯಾರಿಗೂ ಗೊತ್ತಾಗಲಿಲ್ಲವೇಕೆ?: ಈ ಮನೆಯಲ್ಲಿ ಐವರ ಸಾವಿನ ಘಟನಾವಳಿಗಳು ವಿಚಿತ್ರವಾಗಿ ಕಾಣಿಸುತ್ತಿದ್ದು, ಐದು ವರ್ಷಗಳ ಹಿಂದೆಯೇ ಸಾವು ಸಂಭವಿಸಿದ್ದರೆ ಕೊಳೆತ ಶವದ ವಾಸನೆ ಪಕ್ಕದ ಮನೆಯವರಿಗೆ ಬಂದಿಲ್ಲವೇ? ಮನೆ ಬೀಗ ಹಾಕಿದ್ದರೂ ಎಲ್ಲಿಗೆ ಹೋದರು ಎಂಬ ಕನಿಷ್ಟ ಕುತೂಹಲ ಅಕ್ಕಪಕ್ಕದವರಿಗೆ ಮೂಡಿಲ್ಲವೇ? ಕಳೆದ ಐದು ವರ್ಷಗಳಿಂದ ಸಂಬಂಧಿಕರಾರೂ ಇವರನ್ನು ಹುಡುಕಿಕೊಂಡು ಬಂದಿಲ್ಲವೇ? ಕನಿಷ್ಟ ಮದುವೆ ಮುಂತಾದ ಮಂಗಳ ಕಾರ್ಯಕ್ಕೆ ಈ ಕುಟುಂಬ ನೆನಪಾಗಿಲ್ಲವೇ? ಎಂಬ ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿವೆ.