ಸಾರಾಂಶ
ಆದಾಯಕ್ಕಿಂತ 578% ಅಧಿಕ ಆಸ್ತಿ ಮಾಡಿದ್ದ ಬಿಬಿಎಂಪಿ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪಕ್ಕೆ ಒಳಗಾಗಿದ್ದ ಮಹದೇವಪುರ ವಲಯದ ಬಿಬಿಎಂಪಿಯ ಕಂದಾಯ ಅಧಿಕಾರಿ ಬಸವರಾಜ ಮಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.ಮಹದೇವಪುರ ವಲಯದ ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದ ಬಸವರಾಜ ಮಗಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆಂದು ಅವರ ನಿವಾಸ ಮತ್ತಿತರ ಕಡೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಅಧಿಕಾರಿಯು ಆದಾಯಕ್ಕಿಂತ ಶೇ.578 ರಷ್ಟು ಅಕ್ರಮ ಸಂಪಾದನೆ ಮಾಡಿದ್ದಾರೆಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದರು.
ಆರೋಪಿತ ಸಹೋದರಿ ಹೆಸರಿನಲ್ಲಿ ₹1 ಕೋಟಿ ವೆಚ್ಚದ ಪ್ಲಾಟ್, ₹4 ಲಕ್ಷ ಕೈಸಾಲ ನೀಡಿರುವುದು, ₹15 ಲಕ್ಷ ಬೆಲೆಯ ವಾಹನ, ₹25 ಲಕ್ಷದ ಇನ್ನೊಂದು ವಾಹನ ಸೇರಿದಂತೆ ಒಟ್ಟು ₹2.89 ಕೋಟಿ ಬೆಲೆಯ ಹೆಚ್ಚುವರಿ ಸ್ಥಿರ ಮತ್ತು ಚರಾಸ್ತಿಗಳು ಪತ್ತೆಯಾಗಿತ್ತು.ಲೋಕಾಯುಕ್ತ ಪೊಲೀಸರ ತನಿಖೆಗೆ ಅನುವಾಗುವಂತೆ ಬಸವರಾಜ ಮಗಿ ಅವರನ್ನು ಅಮಾನತು ಮಾಡಿರುವುದಲ್ಲದೆ, ಉಗ್ರಾಣ ಮತ್ತು ದಸ್ತಾವೇಜು ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಆದರೆ, ಮುಂದಿನ ಆದೇಶದವರೆಗೂ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.