ಸಾರಾಂಶ
ಬೆಂಗಳೂರು : ಇತ್ತೀಚೆಗೆ ಮಾರಕಾಸ್ತ್ರ ಹಿಡಿದು ಸಿನಿಮೀಯ ಶೈಲಿಯಲ್ಲಿ ಕ್ಲಬ್‌ವೊಂದಕ್ಕೆ ನುಗ್ಗಿ ಇಸ್ಪಿಟ್ ಆಡುತ್ತಿದ್ದವರನ್ನು ಬೆದರಿಸಿ ಹಲ್ಲೆ ಮಾಡಿ 10 ಲಕ್ಷ ರು. ನಗದು ಹಾಗೂ 700 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣ ಸಂಬಂಧ ರೌಡಿ ಶೀಟರ್ ಸೇರಿ ಐವರು ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟ ಪೊಲೀಸ್ ಠಾಣೆಯ ರೌಡಿ ಶೀಟರ್ ಪ್ರವೀಣ್, ಆತನ ಸಹಚರರಾದ ಆನೇಕಲ್‌ನ ಮನೋಹರ್, ಶ್ರೀಕಾಂತ್ ಹಾಗೂ ಫ್ರಾಂಕ್ಲಿನ್ ಸತೀಶ್ ಕುಮಾರ್, ಕನಕಪುರದ ಸೂರಿ ಬಂಧಿತರು. ಆರೋಪಿಗಳು ಮಾ.31ರಂದು ಸಂಜೆ ಬನಶಂಕರಿ 2ನೇ ಹಂತದ ಬಿವಿಕೆ ಕ್ಲಬ್‌ಗೆ ನುಗ್ಗಿ ಇಸ್ಪಿಟ್ ಆಡುತ್ತಿದ್ದ ಸುಮಾರು 10 ಮಂದಿಯ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿ ನಗದು, ಚಿನ್ನಾಭರಣ ಹಾಗೂ ಮೊಬೈಲ್‌ಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಹಲ್ಲೆಗೊಳಗಾದ ರಮೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ಬಂಧಿತರ ಪೈಕಿ ರೌಡಿ ಪ್ರವೀಣ್ ಮತ್ತು ಸೂರಿ ವಿರುದ್ಧ ಈ ಹಿಂದೆ ಬನ್ನೇರುಘಟ್ಟ, ಆಡುಗೋಡಿ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಉಳಿದ ಆರೋಪಿಗಳು ಇವರ ಸಹಚರರಾಗಿದ್ದು, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕ್ಲಬ್‌ಗೆ ನುಗ್ಗಿ ದರೋಡೆ ಮಾಡಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ದೂರುದಾರ ರಮೇಶ್ ಅವರು ಯುಗಾದಿ ಹಬ್ಬದ ಪ್ರಯುಕ್ತ ಮಾ.31ರಂದು ಸುಮಾರು 10 ಮಂದಿ ಸ್ನೇಹಿತರ ಜತೆಗೆ ಬನಶಂಕರಿ 2ನೇ ಹಂತದ ಬಿವಿಕೆ ಕ್ಲಬ್‌ಗೆ ತೆರಳಿ ಮದ್ಯ ಸೇವಿಸಿ, ಕ್ಲಬ್‌ನ ಎರಡನೇ ಮಹಡಿಯ ರೂಮ್‌ನಲ್ಲಿ ಇಸ್ಪಿಟ್ ಆಡುತ್ತಿದ್ದರು. ಸಂಜೆ ಸುಮಾರು 6 ಗಂಟೆಗೆ ಆರು ಮಂದಿ ಮುಸುಕುಧಾರಿ ದುಷ್ಕರ್ಮಿಗಳು ಮಾರಕಾಸ್ತ್ರಗಳೊಂದಿಗೆ ರೂಮ್‌ಗೆ ನುಗ್ಗಿದ್ದರು. ಬಳಿಕ ರಮೇಶ್ ಹಾಗೂ ಅವರ ಸ್ನೇಹಿತರನ್ನು ಬೆದರಿಸಿ, ಹಲ್ಲೆ ಮಾಡಿದ್ದರು. 10 ಲಕ್ಷ ರು. ನಗದು ಹಾಗೂ 700 ಗ್ರಾಂ ಚಿನ್ನಾಭರಣ, ಮೊಬೈಲ್ ಪೋನ್‌ಗಳನ್ನು ದರೋಡೆ ಮಾಡಿದ್ದರು. ನಂತರ ಎಲ್ಲರ ಬಟ್ಟೆ ಬಚ್ಚಿಸಿ ವಿವಸ್ತ್ರಗೊಳಿಸಿ ರೂಮ್‌ನಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದರು.