ತಾವು ಕೆಲಸ ಮಾಡುವ ಕಂಪನಿಯಲ್ಲೇ ಲ್ಯಾಪ್‌ಟಾಪ್‌ ಕಳವು ಮಾಡಿದ್ದ 6 ಮಂದಿ ಆರೋಪಿಗಳ ಅರೆಸ್ಟ್‌

| Published : Nov 30 2024, 01:30 AM IST / Updated: Nov 30 2024, 04:46 AM IST

ಸಾರಾಂಶ

ತಾವು ಕೆಲಸ ಮಾಡುವ ಕಂಪನಿಯಲ್ಲೇ ಲ್ಯಾಪ್‌ಟಾಪ್‌ ಕಳವು ಮಾಡಿದ್ದ 6 ಮಂದಿ ಆರೋಪಿಗಳನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ತಾವು ಕೆಲಸ ಮಾಡುವ  ಕಂಪನಿಯಲ್ಲೇ ಲ್ಯಾಪ್‌ಟಾಪ್‌ ಕಳವು ಮಾಡಿದ್ದ 6 ಮಂದಿ ಆರೋಪಿಗಳನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕನಕಪುರ ರಸ್ತೆಯ ರಘುವನಹಳ್ಳಿ ಪಿ.ಜಿ.ನಿವಾಸಿಗಳಾದ ಭರತ್‌, ವಿಶ್ವನಾಥ, ಯುವರಾಜ್‌, ಮುತ್ತು ಸೇಲ್ವಂ, ಸಂದೀಪ್‌ ಹಾಗೂ ನಾಗೇಂದ್ರ ಪ್ರಸಾದ್‌ ಬಂಧಿತರು.

ಆರೋಪಿಗಳಿಂದ ₹2.40 ಲಕ್ಷ ಮೌಲ್ಯದ 5 ಲ್ಯಾಪ್‌ಟಾಪ್‌ಗಳು, 2 ಲ್ಯಾಪ್‌ಟಾಪ್‌ ಬ್ಯಾಗ್, ಚಾರ್ಜರ್, ಕಂಪನಿಯ ಕೆಲವು ಜೆರಾಕ್ಸ್ ದಾಖಲಾತಿಗಳು, ಫೆಡರಲ್ ಬ್ಯಾಂಕ್‌ನ ಖಾಲಿ ಚೆಕ್‌ಗಳು, ಡಿವಿಆರ್‌, ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ದುಷ್ಕರ್ಮಿಗಳು ಜೆ.ಪಿ.ನಗರ 3ನೇ ಹಂತದ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಕಚೇರಿಯ ಹಿಂಬಾಗಿಲ ಚಿಲಕ ಮುರಿದು ಕಚೇರಿಯಲ್ಲಿದ್ದ 5 ಲ್ಯಾಪ್‌ ಟಾಪ್‌ಗಳು, ಲ್ಯಾಪ್‌ ಟಾಪ್ ಬ್ಯಾಗ್‌ಗಳು, ಚಾರ್ಜರ್‌ಗಳು, ಕಂಪನಿಯ ಕೆಲವು ಜೆರಾಕ್ಸ್‌ ದಾಖಲೆಗಳು, ಫೆಡರಲ್‌ ಬ್ಯಾಂಕಿನ ಖಾಲಿ ಚೆಕ್‌ಗಳು, ಡಿವಿಆರ್‌ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ್ದರು.

ಈ ಸಂಬಂಧ ಕಂಪನಿ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾದ ಪೊಲೀಸರು, ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವಿನ ಮೇರೆಗೆ 6 ಮಂದಿಯನ್ನುಬಂಧಿಸಿದ್ದಾರೆ.

ಮಾಲೀಕರ ಜತೆಗೆ ಮನಸ್ತಾಪ: ಬಂಧಿತ ಆರೋಪಿಗಳು ಕಂಪನಿಯ ಉದ್ಯೋಗಿಗಳಾಗಿದ್ದಾರೆ. ಸಂಬಳದ ವಿಚಾರಕ್ಕೆ ಕಂಪನಿ ಮಾಲೀಕರ ಜತೆಗೆ ಮನಸ್ತಾಪ ಮಾಡಿಕೊಂಡಿದ್ದರು. ಈ ಪೈಕಿ ಆರೋಪಿ ಭರತ್‌ ವಾರದ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ. ಬಳಿಕ ಇತರೆ ಐವರು ಆರೋಪಿಗಳ ಜತೆ ಸೇರಿಕೊಂಡು ಕಂಪನಿಯಲ್ಲಿ ಲ್ಯಾಪ್‌ ಟಾಪ್‌ಗಳನ್ನು ಕಳವು ಮಾಡಲು ಸಂಚು ರೂಪಿಸಿದ್ದ. ಅದರಂತೆ ನ.12ರ ರಾತ್ರಿ ಕಂಪನಿಯ ಕಚೇರಿಯ ಹಿಂಬಾಗಿಲ ಚಿಲಕ ಮುರಿದು ಲ್ಯಾಪ್‌ ಟಾಪ್‌ ಸೇರಿ ಇತರೆ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು.