ಎಟಿಎಂಗೆ ಹಣ ಹಾಕೋ ಕಾರು ತಡೆದು ಭರ್ಜರಿ ₹7 ಕೋಟಿ ದರೋಡೆ

| Published : Nov 20 2025, 12:00 AM IST

ಸಾರಾಂಶ

ಎಟಿಎಂ ಘಟಕಗಳಿಗೆ ಹಣ ಪೂರೈಸುತ್ತಿದ್ದ ಖಾಸಗಿ ಏಜೆನ್ಸಿ ವಾಹನವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ ಬಳಿಕ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿ ದುಷ್ಕರ್ಮಿಗಳು 7.11 ಕೋಟಿ ದೋಚಿರುವ ಘಟನೆ ಬುಧವಾರ ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿದೆ. ಇದು ಇತ್ತೀಚಿನ ದಿನಗಳಲ್ಲಿ ರಾಜಧಾನಿಯಲ್ಲಿ ನಡೆದ ಅತಿ ದೊಡ್ಡ ದರೋಡೆ ಕೃತ್ಯಗಳಲ್ಲೊಂದಾಗಿದೆ.

---ಬೆಂಗಳೂರಲ್ಲಿ ಹಾಡಹಗಲೇ ಸಿನಿಮೀಯ ಕೃತ್ಯ- ಹಣ ತುಂಬಿಸಲು ಹೊರಟಿದ್ದ ವಾಹನ ತಡೆದು, ಮೂವರು ಸಿಬ್ಬಂದಿ ಕಿಡ್ನಾಪ್‌- ಸ್ವಲ್ಪ ದೂರ ಸಾಗಿದ ಬಳಿಕ ಮೂವರನ್ನು ಇಳಿಸಿ ಹಣದೊಂದಿಗೆ ಎಸ್ಕೇಪ್‌- ಆರ್‌ಬಿಐ ಅಧಿಕಾರಿಗಳ ಹೆಸರಲ್ಲಿ ಕೃತ್ಯ । 4 ಶಂಕಿತರು ವಶಕ್ಕೆ, ವಿಚಾರಣೆ

---ಘಟನೆ ನಡೆದಿದ್ದು ಹೇಗೆ?

ಜೆ.ಪಿ.ನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಹಣ ಸಂಗ್ರಹಿಸಿ ಬೇರೆಡೆ ಎಟಿಎಂಗೆ ಹಣ ತುಂಬಲು ಹೊರಟಿದ್ದ ಸಿಎಂಎಸ್ ಏಜೆನ್ಸಿಯ ನಾಲ್ವರು ಸಿಬ್ಬಂದಿ

ಅಶೋಕಾ ಟವರ್‌ ಬಳಿ, ಸಿಎಂಎಸ್‌ ವಾಹನ ಅಡ್ಡಗಟ್ಟಿದ್ದ 6 ಜನರ ತಂಡ. ತಾವು ಆರ್‌ಬಿಐ ಅಧಿಕಾರಿಗಳು. ತಪಾಸಣೆ ನಡೆಸಬೇಕು ಬನ್ನಿ ಎಂದು ಸೂಚನೆ

ಅದರಂತೆ ಸಿಎಂಎಸ್‌ನ ಮೂವರು ಸಿಬ್ಬಂದಿ, ವಾಹನದಲ್ಲಿ ಹಣ ತನ್ನ ಇನ್ನೋವಾ ಕಾರಿಗೆ ತುಂಬಿಕೊಂಡು ದರೋಡೆಕೋರರ ತಂಡ ಬೇರೆ ರಸ್ತೆಯಲ್ಲಿ ಪರಾರಿ

ಬಳಿಕ ಡೇರಿ ವೃತ್ತದ ಮೇಲುಸೇತುವೆ ಮೇಲೆ ಸಿಎಂಎಸ್‌ ಸಂಸ್ಥೆಯ ನಾಲ್ವರನ್ನು ಇಳಿಸಿ, 7.11 ಕೋಟಿ ಹಣದೊಂದಿಗೆ ದರೋಡೆಕೋರರ ತಂಡ ಎಸ್ಕೇಪ್‌

ಘಟನೆ ನಡೆದ 1 ಗಂಟೆ ಬಳಿಕ ಪೊಲೀಸರಿಗೆ ಸಂಸ್ಥೆಯಿಂದ ಮಾಹಿತಿ. ಕೃತ್ಯದಲ್ಲಿ ಪರಿಚಿತರ ಕೈವಾಡದ ಬಗ್ಗೆ ಶಂಕೆ. ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

==

ಕನ್ನಡಪ್ರಭ ವಾರ್ತೆ ಬೆಂಗಳೂರುಎಟಿಎಂ ಘಟಕಗಳಿಗೆ ಹಣ ಪೂರೈಸುತ್ತಿದ್ದ ಖಾಸಗಿ ಏಜೆನ್ಸಿ ವಾಹನವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ ಬಳಿಕ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿ ದುಷ್ಕರ್ಮಿಗಳು 7.11 ಕೋಟಿ ದೋಚಿರುವ ಘಟನೆ ಬುಧವಾರ ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿದೆ. ಇದು ಇತ್ತೀಚಿನ ದಿನಗಳಲ್ಲಿ ರಾಜಧಾನಿಯಲ್ಲಿ ನಡೆದ ಅತಿ ದೊಡ್ಡ ದರೋಡೆ ಕೃತ್ಯಗಳಲ್ಲೊಂದಾಗಿದೆ.ಜೆ.ಪಿ.ನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಹಣ ಸಂಗ್ರಹಿಸಿ ಗೋವಿಂದಪುರದ ಎಟಿಎಂ ಘಟಕಗಳಿಗೆ ತುಂಬಲು ಸಿಎಂಎಸ್ ಏಜೆನ್ಸಿಯ ನಾಲ್ವರು ಸಿಬ್ಬಂದಿ ತೆರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಆ ವಾಹನವನ್ನು ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ ಆರು ಮಂದಿ ದರೋಡೆ ಕೃತ್ಯ ಎಸಗಿದ್ದಾರೆ. ಈ ಕೃತ್ಯದಲ್ಲಿ ಪರಿಚಿತರ ಕೈವಾಡವಿರುವ ಬಗ್ಗೆ ಶಂಕಿಸಿರುವ ಪೊಲೀಸರು, ಈ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.ಪಿಸ್ತೂಲ್ ತೋರಿಸಿ ಬೆದರಿಕೆ:

ನಗರ ವ್ಯಾಪ್ತಿಯ ಎಟಿಎಂ ಘಟಕಗಳಿಗೆ ಹಣ ಪೂರೈಸುವ ಗುತ್ತಿಗೆಯನ್ನು ಎಚ್‌ಡಿಎಫ್‌ಸಿ ಸೇರಿ ಇತರೆ ಬ್ಯಾಂಕ್‌ಗಳಿಂದ ಸಿಎಂಎಸ್ ಇನ್ಫೋ ಸಿಸ್ಟಮ್‌.ಲಿ ಪಡೆದಿದೆ. ಅಂತೆಯೇ ಗೋವಿಂದಪುರದ ಎಟಿಎಂ ಕೇಂದ್ರಗಳಿಗೆ ಹಣ ಸರಬರಾಜಿಗೆ ಆ ಕಂಪನಿಯ ಕಸ್ಟೋಡಿಯನ್ ಆಫ್ತಾಬ್‌ ನೇತೃತ್ವದ ತಂಡ ನಿಯೋಜನೆ ಆಗಿತ್ತು. ತಂಡದಲ್ಲಿಸೆಕ್ಯೂರಿಟಿ ಗಾರ್ಡ್‌ಗಳಾದ ರಾಜು, ತಮ್ಮಯ್ಯ, ಕಸ್ಟೋಡಿಯನ್ ಅಫ್ತಾಬ್‌ ಹಾಗೂ ಚಾಲಕ ಬಿನೋದ್ ಕುಮಾರ್‌ ಇದ್ದರು.

ಪೂರ್ವನಿಗದಿಯಂತೆ ಜೆ.ಪಿ.ನಗರದ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಿಂದ 7.11 ಕೋಟಿ ಹಣವನ್ನು ಟ್ರಂಕ್‌ಗಳಲ್ಲಿ ತುಂಬಿಕೊಂಡು ಬುಧವಾರ ಮಧ್ಯಾಹ್ನ 12.30 ಗಂಟೆಗೆ ಗೋವಿಂದಪುರಕ್ಕೆ ಜಯನಗರ ಮಾರ್ಗವಾಗಿ ಸಿಬ್ಬಂದಿ ತೆರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಅಶೋಕ ಫಿಲ್ಲರ್ ದಾಟಿ ಲಾಲ್‌ ಬಾಗ್‌ ಸಿದ್ದಾಪುರ ಗೇಟ್ ಬಳಿ ಬಂದಾಗ ಇನ್ನೋವಾದಲ್ಲಿ ಬಂದ ಐದಾರು ಮಂದಿ ದರೋಡೆಕೋರರು, ಸಿಎಂಎಸ್ ವಾಹನವನ್ನು ಅಡ್ಡಗಟ್ಟಿದ್ದಾರೆ. ತಮ್ಮನ್ನು ಆರ್‌ಬಿಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ದರೋಡೆಕೋರರು, ನಿಮ್ಮ ವಾಹನದಲ್ಲಿ ಸಾಗಿಸುತ್ತಿರುವ ಹಣ ಪರಿಶೀಲಿಸಬೇಕಿದೆ ಎಂದಿದ್ದಾರೆ. ಬಳಿಕ ಚಾಲಕ ಹೊರತುಪಡಿಸಿ ಮೂವರು ಸಿಬ್ಬಂದಿಯನ್ನು ಕೆಳಗಿಳಿಸಿದ್ದಾರೆ. ತಮ್ಮ ಇನ್ನೋವಾ ಕಾರಿಗೆ ಗನ್‌ ಮ್ಯಾನ್‌ಗಳು ಹಾಗೂ ಕಸ್ಟೋಡಿಯನ್‌ ಅನ್ನು ಹತ್ತಿಸಿಕೊಂಡ ಆರೋಪಿಗಳು, ಚಾಲಕನಿಗೆ ತಮ್ಮ ಕಾರು ಹಿಂಬಾಲಿಸಲು ಸೂಚಿಸಿದ್ದಾರೆ. ನಂತರ ಡೇರಿ ವೃತ್ತದ ಮೇಲ್ಸೇತುವೆಯಲ್ಲಿ ಹಣವಿದ್ದ ವಾಹನದ ಚಾಲಕನಿಗೆ ಪಿಸ್ತೂಲ್‌ನಿಂದ ಬೆದರಿಸಿ ಕ್ಷಣಾರ್ಧದಲ್ಲಿ ಹಣ ದೋಚಿದ್ದಾರೆ. ತಮ್ಮ ಕಾರಿನಲ್ಲಿದ್ದ ಸಿಎಂಎಸ್‌ ಸಿಬ್ಬಂದಿಯನ್ನು ಅದೇ ಮಾರ್ಗದಲ್ಲಿ ನಂತರ ಕೆಳಿಳಿಸಿ ಪರಾರಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.1 ಗಂಟೆ ತಡವಾಗಿ ಮಾಹಿತಿ:

ಈ ಕೃತ್ಯದ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112) ಹಾಗೂ ಬ್ಯಾಂಕ್ ಅಧಿಕಾರಿಗಳಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿಎಂಎಸ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಸೇರಿ ಹಿರಿಯ ಅಧಿಕಾರಿಗಳು ಧಾವಿಸಿದ್ದಾರೆ. ತಕ್ಷಣವೇ ನಗರ ವ್ಯಾಪ್ತಿಯಲ್ಲಿ ನಾಕಾ ಬಂದ್ ಮಾಡಿ ವಾಹನ ತಪಾಸಣೆಗೆ ಪೊಲೀಸರು ಆರಂಭಿಸಿದ್ದರು. ಆದರೆ ಅಷ್ಟರಲ್ಲಿ ಹೊಸೂರು ರಸ್ತೆ ಮೂಲಕ ತಮಿಳುನಾಡಿನ ಕಡೆಗೆ ಹಣದ ಸಮೇತ ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಕಲಿ ನಂಬರ್ ಪ್ಲೇಟ್ ಬಳಕೆ:

ಈ ದರೋಡೆ ಕೃತ್ಯಕ್ಕೆ ಬಳಸಲಾದ ಬೂದು ಬಣ್ಣದ ಇನ್ನೋವಾ (ಕೆಎ-03, ಎನ್‌ಸಿ-8052) ಗೆ ನಕಲಿ ನಂಬರ್ ಪ್ಲೇಟ್ ಉಪಯೋಗಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಇಂದಿರಾನಗರದ ಪಿ.ಬಿ.ಗಂಗಾಧರ್ ಎಂಬುವರಿಗೆ ಸೇರಿದ ಸ್ವಿಫ್ಟ್ ಕಾರಿನ ನಂಬರ್ ಅನ್ನು ಇನ್ನೋವಾಗೆ ಆರೋಪಿಗಳು ಬಳಸಿದ್ದಾರೆ ಎಂದು ಹೇಳಲಾಗಿದೆ.==ಸಿಎಂಎಸ್ ಸಿಬ್ಬಂದಿ ಮೇಲೆ ಶಂಕೆ

ದರೋಡೆ ಕೃತ್ಯದಲ್ಲಿ ಸಿಎಂಎಸ್ ಸಿಬ್ಬಂದಿ ಮೇಲೆಯೇ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೃತ್ಯ ನಡೆದು 1 ಗಂಟೆ ಬಳಿಕ ಪೊಲೀಸರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಜನನಿಬಿಡ ಪ್ರದೇಶದಲ್ಲಿ ತಮ್ಮನ್ನು ಬೆದರಿಸಿ ದರೋಡೆ ನಡೆದಿದ್ದರೂ ಯಾಕೆ ರಕ್ಷಣೆಗೆ ಕೂಗಿಕೊಳ್ಳಲಿಲ್ಲ? ಅಲ್ಲದೆ, ಸಾರ್ವಜನಿಕರಿಗೆ ಸಿಬ್ಬಂದಿ ಯಾಕೆ ಹೇಳಲಿಲ್ಲ? ಎಂಬ ಪ್ರಶ್ನೆಗಳು ಮೂಡಿವೆ. ಈ ಹಿನ್ನಲೆಯಲ್ಲಿ ಹಣ ಪೂರೈಕೆ ವಾಹನದಲ್ಲಿದ್ದ ಸಿಎಂಎಸ್ ಏಜೆನ್ಸಿಯ ನಾಲ್ವರು ಸಿಬ್ಬಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅಲ್ಲದೆ ಸಿದ್ದಾಪುರ ಠಾಣೆಯಲ್ಲಿ ಆ ಕಂಪನಿಯ ಭದ್ರತಾ ವಿಭಾಗದ ಮುಖ್ಯಸ್ಥ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಟಿ.ನಾಯಕ್ ಅವರಿಂದಲೂ ಪೊಲೀಸರು ಮಾಹಿತಿ ಪಡೆದಿದ್ದಾರೆ.----ಜೆ.ಪಿ.ನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಗೋವಿಂದಪುರಕ್ಕೆ ಹಣ ಸಾಗಿಸುವಾಗ ದರೋಡೆ ನಡೆದಿದೆ. ಕೃತ್ಯದ ಬಗ್ಗೆ ಮಾಹಿತಿ ನೀಡಲು ಒಂದು ಗಂಟೆ ವಿಳಂಬಕ್ಕೆ ದರೋಡೆಕೋರರು ಮೊಬೈಲ್ ಕಸಿದುಕೊಂಡಿದ್ದರು ಎಂದು ಸಿಬ್ಬಂದಿ ಕಾರಣ ಕೊಟ್ಟಿದ್ದಾರೆ. ಆದರೆ ಈ ಹೇಳಿಕೆ ಬಗ್ಗೆ ನಮಗೂ ಅನುಮಾನವಿದೆ. ಕಳೆದ ಏಳೆಂಟು ವರ್ಷಗಳಿಂದ ಏಜೆನ್ಸಿಯಲ್ಲಿ ನಾಲ್ವರು ಸಿಬ್ಬಂದಿ ಕೆಲಸ ಮಾಡುತ್ತಿದ್ದರು.-ನಟರಾಜ್‌, ಭದ್ರತಾ ಮೇಲ್ವಿಚಾರ, ಸಿಎಂಎಸ್ ಏಜೆನ್ಸಿ----ಎಟಿಎಂ ವಾಹನದಲ್ಲಿ ದರೋಡೆ ಕೃತ್ಯದ ಬಗ್ಗೆ ಪಶ್ಚಿಮ ವಿಭಾಗದ ಜಂಟಿ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ವಾಹನದಲ್ಲಿ 7 ಕೋಟಿ ರು. ಹಣವಿತ್ತು ಎಂದು ಸಿಎಂಎಸ್ ಏಜೆನ್ಸಿ ಹೇಳಿದ್ದು, ಈ ಹಣದ ಕುರಿತು ಪರಿಶೀಲನೆ ನಡೆದಿದೆ. ದರೋಡೆಕೋರರ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ.- ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತ, ಬೆಂಗಳೂರು ನಗರ