ಸಾರಾಂಶ
ಬೆಂಗಳೂರು : ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಉದ್ಯಮಿಗೆ ಸಹಾಯದ ನೆಪದಲ್ಲಿ ಹೂಡಿಕೆ ಹೆಸರಿನಲ್ಲಿ ₹9.60 ಕೋಟಿ ಪಡೆದು ವಂಚಿಸಿದ ಆರೋಪದಡಿ ‘ವೀರ ಕಂಬಳ’ ಸಿನಿಮಾ ನಿರ್ಮಾಪಕ ಸೇರಿ ಐವರ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಂಟ್ವಾಳ ಮೂಲದ ಉದ್ಯಮಿ ಟಿ.ವರದರಾಜು ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಸಿನಿಮಾ ನಿರ್ಮಾಪಕ ಅರುಣ್ ರೈ, ಅರ್ಜುನ್ ರೈ, ಕೆ.ಪಿ.ಶ್ರೀನಿವಾಸ್, ರಘು ಹಾಗೂ ಗೋವಿಂದಪ್ಪ ಎಂಬುವವರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಮೋಸ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನ ವಿವರ: ವರದರಾಜು ನೀಡಿದ ದೂರಿನಲ್ಲಿ ತಾವು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗೇರುಬೀಜ ಸಂಸ್ಕರಣಾ ಘಟಕ ನಡೆಸುತ್ತಿದ್ದು, 2020ರ ಕೋವಿಡ್‌ನಿಂದಾಗಿ ವ್ಯವಹಾರದಲ್ಲಿ ಸುಮಾರು ₹25 ಕೋಟಿ ನಷ್ಟವಾದ ಹಿನ್ನೆಲೆಯಲ್ಲಿ 2023ರ ಏಪ್ರಿಲ್‌ನಲ್ಲಿ ಎಲ್ಲ ಗೇರುಬೀಜ ಸಂಸ್ಕರಣಾ ಘಟಕಗಳನ್ನು ಮುಚ್ಚಿದ್ದೇನೆ. ಇತ್ತೀಚೆಗೆ ಯಶವಂತಪುರದ ತಾಜ್ ಹೋಟೆಲ್‌ನಲ್ಲಿ ಮಂಗಳೂರು ಮೂಲದ ಅರುಣ್ ರೈ ಪರಿಚಯವಾಗಿದ್ದರು. ಈ ವೇಳೆ ಅವರು ನನ್ನ ವ್ಯವಹಾರದ ಬಗ್ಗೆ ತಿಳಿದುಕೊಂಡು ಮೊಬೈಲ್ ಸಂಖ್ಯೆ ಪಡೆದು ಆಗಾಗ ಮಾತನಾಡುತ್ತಿದ್ದರು.
ಈ ವೇಳೆ ದೇಶ-ವಿದೇಶಗಳಲ್ಲಿ ನನ್ನ ಮಾಲೀಕತ್ವದಲ್ಲಿ ಹಲವು ಕಂಪನಿಗಳಿವೆ. ವೀರ ಕಂಬಳ ಮತ್ತು ಜೀಟಿಗೆ ಎಂಬ ಸಿನಿಮಾಗಳನ್ನು ನಿರ್ಮಿಸಿದ್ದು, ಬಿಡುಗಡೆ ಹಂತದಲ್ಲಿವೆ. ವೀರ ಕಂಬಳ ಸಿನಿಮಾ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನನಗೆ ₹60 ಲಕ್ಷ ಲಾಭಾಂಶ ನೀಡಲಿದ್ದಾರೆ. ತನ್ನ ಕಂಪನಿಗಳಲ್ಲಿ ನೀವು ಹೂಡಿಕೆ ಮಾಡಿದರೆ, ಕೋವಿಡ್‌ನಿಂದ ವ್ಯವಹಾರದಲ್ಲಿ ಆಗಿರುವ ನಷ್ಟ ಸರಿದೂಗಿಸಲು ಸಹಾಯ ಮಾಡುತ್ತೇನೆ ಎಂದು ಅರುಣ್ ರೈ ಹೇಳಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹೂಡಿಕೆ ಮಾಡಿದರೆ ಸಹಾಯದ ಭರವಸೆ:
ಇಷ್ಟೇ ಅಲ್ಲ ಅರುಣ್ ರೈ, ದೆಹಲಿಯಲ್ಲಿ ₹400 ಕೋಟಿ ಹೂಡಿಕೆ ಮಾಡಿದ್ದೇನೆ. ತಮಿಳುನಾಡಿನ ದಿಂಡಿಗಲ್‌ನ ಕಾಳಿ ಸ್ವಾಮಿಯಿಂದ ₹50 ಕೋಟಿ ಬರಬೇಕು. ಪಳನಿ ದೇವಸ್ಥಾನ ಟ್ರಸ್ಟ್‌ನಿಂದ ಸಾಲ ಕೊಡಿಸುತ್ತೇನೆ. ಜಾರ್ಖಂಡ್‌ನ ರಾಂಚಿಯ ನನ್ನ ಕಂಪನಿಗೆ ಸರ್ಕಾರದಿಂದ ₹50 ಕೋಟಿ ಬಿಲ್ ಬಾಕಿಯಿದೆ ಎಂದು ಕೆಲವು ಬಿಲ್‌ಗಳನ್ನು ತೋರಿಸಿದ್ದರು. ನನ್ನ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ, ಮಂಗಳೂರಿನ ಗೋದಾಮಿನಲ್ಲಿರುವ ₹40 ಕೋಟಿ ಮೌಲ್ಯದ ಗೊಡಂಬಿ ಮಾರಾಟ ಮಾಡಿ ನಿಮ್ಮ ₹25 ಕೋಟಿ ಸಾಲ ತೀರಿಸಲು ಸಹಾಯ ಮಾಡುತ್ತೇನೆ. ನಿಮ್ಮ ಇಂಡಸ್ಟ್ರೀಸ್ ಮುಂದುವರೆಸಲು ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು.
₹9.60 ಕೋಟಿ ಪಡೆದು ವಂಚನೆ:
ಬಳಿಕ ಅರುಣ್ ರೈ ಅವರು ಮಂಗಳೂರು, ಬೆಂಗಳೂರು, ತುಮಕೂರು, ಮೈಸೂರು ನರಗದ ವಿವಿಧೆಡೆ ಕಚೇರಿಗಳು ಹಾಗೂ ಮನೆಗಳನ್ನು ತೋರಿಸಿದ್ದರು. ದುಬೈ, ಮಲೇಷಿಯಾ ಇತರೆ ದೇಶಗಳಲ್ಲಿ ಅಂತಾರಾಷ್ಟ್ರೀಯ ವ್ಯವಹಾರ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ಬಳಿಕ ಕೆಲವು ವ್ಯಕ್ತಿಗಳನ್ನು ವ್ಯವಹಾರದ ಪಾಲುದಾರರು ಎಂದು ಪರಿಚಯಿಸಿದ್ದರು.
ಅರುಣ್ ರೈ ಅವರ ಮಾತು ನಂಬಿ ಹೂಡಿಕೆ ಮಾಡಲು ಒಪ್ಪಿದೆ. ಬಳಿಕ ಪರಿಚಿತರು, ಸ್ನೇಹಿತರು, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಅರುಣ್ ರೈ ಖಾತೆಗೆ ₹8.75 ಕೋಟಿ, ರಘು ಖಾತೆಗೆ ₹40 ಲಕ್ಷ ಹಾಗೂ ಗೋವಿಂದಪ್ಪನ ಖಾತೆಗೆ ₹45 ಲಕ್ಷ ಸೇರಿ ಒಟ್ಟು ₹9.60 ಕೋಟಿ ವರ್ಗಾಯಿಸಿದ್ದೆ. ಬಳಿಕ ಅರುಣ್ ರೈ ಕೆಲವು ದಾಖಲೆಗಳಿಗೆ ಸಹಿ ಪಡೆದುಕೊಂಡಿದ್ದರು.
ಬಳಿಕ ಅರುಣ್ ರೈ ಅವರು ನನಗೆ ಯಾವುದೇ ಸಹಾಯ ಮಾಡದೆ ಅಥವಾ ಹಣವನ್ನೂ ವಾಪಾಸ್ ನೀಡದೆ ವಂಚಿಸಿದ್ದಾರೆ. ಅರುಣ್ ರೈ ಅವರು ಈ ಹಿಂದೆ ಹಲವರಿಂದ ಹಣ ಪಡೆದು ವಂಚಿಸಿರುವುದು ತಿಳಿದು ಬಂದಿದೆ. ಹೀಗಾಗಿ ಅರುಣ್ ರೈ ಸೇರಿ ಇತರೆ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉದ್ಯಮಿ ವರದರಾಜು ದೂರಿನಲ್ಲಿ ವಿವರಿಸಿದ್ದಾರೆ.