ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಬಂದ ಜಾಹೀರಾತು ಸಂದೇಶ ನಂಬಿ ವ್ಯಕ್ತಿಯೊಬ್ಬರು ₹96.20 ಲಕ್ಷ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿರುವ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊತ್ತನೂರಿನ ಬಾಲಾಜಿ ಲೇಔಟ್ ನಿವಾಸಿ ಎ.ಯು.ಅಯ್ಯಪ್ಪ(38) ವಂಚನೆಗೆ ಒಳಗಾದವರು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಅಯ್ಯಪ್ಪ ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಂಚಕರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?
ದೂರುದಾರ ಅಯ್ಯಪ್ಪ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್ ನೋಡುವಾಗ ಇನ್ವೆಸ್ಟ್ ಸ್ಟಾಕ್ ಮಾರ್ಕೆಟ್ ಎಂಬ ಜಾಹೀರಾತು ಬಂದಿದೆ. ಆ ಜಾಹೀರಾತಿನಲ್ಲಿ ನೀಡಲಾಗಿದ್ದ ಅಪರಿಚಿತ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದಾಗ ಅಯ್ಯಪ್ಪ ಅವರ ಮೊಬೈಲ್ ಸಂಖ್ಯೆಯನ್ನು ವಾಟ್ಸಾಪ್ ಗ್ರೂಪ್‌ಗೆ ಸೇರಿಸಲಾಗಿದೆ.
ಬಳಿಕ ಆ ಗ್ರೂಪ್‌ನಲ್ಲಿ ಟ್ರೇಡಿಂಗ್ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ನಂತರ ದುಷ್ಕರ್ಮಿಗಳು ಅಯ್ಯಪ್ಪ ಅವರಿಂದ ಸಿಎಚ್‌ಸಿ ಎಸ್‌ಇಎಸ್ ಎಂಬ ಆ್ಯಪ್ ಡೌನ್ ಲೋಡ್ ಮಾಡಿಸಲಾಗಿದೆ. ಬಳಿಕ ದುಷ್ಕರ್ಮಿಗಳ ಸೂಚನೆ ಮೇರೆಗೆ ಅಯ್ಯಪ್ಪ ಅವರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಇತರೆ ಮಾಹಿತಿಗಳನ್ನು ಆ್ಯಪ್‌ನಲ್ಲಿ ಭರ್ತಿ ಮಾಡಿದ್ದಾರೆ.
ವಿವಿಧ ಹಂತದಲ್ಲಿ ಹಣ ಪಾವತಿ: ನಂತರ ದುಷ್ಕರ್ಮಿಗಳ ಸೂಚನೆಯಂತೆ ಅವರು ನೀಡಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ಅಯ್ಯಪ್ಪ ಅವರು ಹಂತ ಹಂತವಾಗಿ ಆನ್‌ಲೈನ್ ಮುಖಾಂತರ ₹96.20 ಲಕ್ಷ ವರ್ಗಾಯಿಸಿದ್ದಾರೆ. ಆದರೆ, ಯಾವುದೇ ಲಾಭ ಬಂದಿಲ್ಲ. ಈ ಬಗ್ಗೆ ಅಯ್ಯಪ್ಪ ಪ್ರಶ್ನೆ ಮಾಡಿದಾಗ ದುಷ್ಕರ್ಮಿಗಳು ಸಂಪರ್ಕ ಕಡಿತಗೊಳಿಸಿದ್ದಾರೆ.
ಬಳಿಕ ಅಯ್ಯಪ್ಪ ಅವರು ತಾವು ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ಅರಿವಾಗಿದೆ. ಬಳಿಕ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.