ಸಾರಾಂಶ
ಹಣಕಾಸಿನ ವಿಚಾರಕ್ಕೆ ವೈಮನಸ್ಸು ಉಂಟಾಗಿ ಖಾಸಗಿ ಫೋಟೋ ಮತ್ತು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಪರಿಣಾಮ ತನ್ನ ಪ್ರಿಯಕರನನ್ನು ಪ್ರಿಯತಮೆ ಮತ್ತು ಆಕೆಯ ಸಹೋದರ ಸೇರಿ ಭೀಕರವಾಗಿ ಕೊಲೆಗೈದಿರುವ ಘಟನೆ ಸೋಮವಾರ ರಾತ್ರಿ ಪಟ್ಟಣದ ನರಸೇಗೌಡ ರಸ್ತೆಯ 8ನೇ ತಿರುವಿನ ಬಳಿ ನಡೆದಿದೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ಹಣಕಾಸಿನ ವಿಚಾರಕ್ಕೆ ವೈಮನಸ್ಸು ಉಂಟಾಗಿ ಖಾಸಗಿ ಫೋಟೋ ಮತ್ತು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಪರಿಣಾಮ ತನ್ನ ಪ್ರಿಯಕರನನ್ನು ಪ್ರಿಯತಮೆ ಮತ್ತು ಆಕೆಯ ಸಹೋದರ ಸೇರಿ ಭೀಕರವಾಗಿ ಕೊಲೆಗೈದಿರುವ ಘಟನೆ ಸೋಮವಾರ ರಾತ್ರಿ ಪಟ್ಟಣದ ನರಸೇಗೌಡ ರಸ್ತೆಯ 8ನೇ ತಿರುವಿನ ಬಳಿ ನಡೆದಿದೆ.ಎಚ್.ಡಿ. ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ಸಿದ್ದೇಗೌಡನಹುಂಡಿ ನಿವಾಸಿ ರಾಜೇಶ್ ಮೃತಪಟ್ಟವನು.
ಮೈಸೂರಿನ ಕ್ಯಾತಮಾರನಹಳ್ಳಿ ಗ್ರಾಮದ ಪ್ರೇಮಾ ನಂಜನಗೂಡಿನ ಶ್ರೀರಾಂಪುರ ಬಡಾವಣೆಯ ನಾರಾಯಣ ಎಂಬವರನ್ನು ಕಳೆದ 15 ವರ್ಷಗಳ ಹಿಂದೆ ವಿವಾಹವಾಗಿದ್ದರು. ಒಂದು ತಿಂಗಳ ಹಿಂದೆಯಷ್ಟೆ ಪತಿ ನಾರಾಯಣ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಪತಿಯ ಸ್ನೇಹಿತನಾಗಿದ್ದ ರಾಜೇಶ್ ಆಗಾಗ ಮನೆಗೆ ಬರುತ್ತಿದ್ದ ಎನ್ನಲಾಗಿದ್ದು. ಪರಿಚಯ ಸಲುಗೆಗೆ ತಿರುಗಿ ಇಬ್ಬರ ಮಧ್ಯೆ ಅಕ್ರಮ ಸಂಬಂಧ ಬೆಳೆದಿತ್ತು. ಇಬ್ಬರ ಖಾಸಗಿ ಫೋಟೋ ಮತ್ತು ವಿಡಿಯೋಗಳು ಕೂಡ ಇಬ್ಬರ ನಡುವೆ ವರ್ಗಾವಣೆಯೂ ಆಗಿತ್ತು. ಈ ಮಧ್ಯೆ ಮೃತ ರಾಜೇಶ್ ಪ್ರೇಮಾಗೆ ಹಣ ಕೊಟ್ಟಿದ್ದನು ಎನ್ನಲಾಗಿದ್ದು. ವಾಪಸ್ಸು ಹಣ ಕೊಡುವಂತೆ ಕೇಳಿದ್ದರಿಂದಾಗಿ ಹಣಕಾಸಿನ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು. ಹಣ ವಾಪಸ್ಸು ಕೊಡದಿದ್ದಲ್ಲಿ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ವೈರಲ್ ಮಾಡುವುದಾಗಿಯೂ ಮೃತ ರಾಜೇಶ್ ಬೆದರಿಕೆ ಹಾಕಿದ್ದ.ಇದರಿಂದ ಕುಪಿತಳಾಗಿದ್ದ ಪ್ರೇಮಾ, ಈ ವಿಚಾರವಾಗಿ ಮಾತನಾಡಬೇಕೆಂದು ಮೃತ ರಾಜೇಶ್ ನನ್ನು ಸೋಮವಾರ ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಪ್ರೇಮಾ ಮತ್ತು ಪ್ರೇಮಾಳ ಸಹೋದರ ಶಿವು ರಾಜೇಶ್ ವಿರುದ್ದ ತಿರುಗಿ ಬಿದ್ದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ರಾಜೇಶ್ ಮನೆಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಅವನ ಬೆನ್ನತ್ತಿದ ಪ್ರೇಮಾ ಮತ್ತು ಆಕೆಯ ಸಹೋದರ ಶಿವು ನರಸೇಗೌಡ ರಸ್ತೆಯ 8ನೇ ತಿರುವಿನ ಬಳಿ ರಾಜೇಶ್ ಮೇಲೆ ಹಲ್ಲೆ ನಡೆಸಿ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಒಡೆದಿದ್ದಾರೆ, ಕೆಳಗೆ ಬಿದ್ದ ರಾಜೇಶ್ ನ ತಲೆಯ ಮೇಲೆ ಕಲ್ಲು ಚಪ್ಪಡಿ ಎತ್ತಿ ಹಾಕಿ ಕೊಲೆಗೈದಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ನಂದಿನಿ, ಡಿವೈಎಸ್ಪಿ ರಘು, ಪಟ್ಟಣದ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಬಸವರಾಜು, ಪಿಎಸೈ ಪ್ರಕಾಶ್ ಮದ್ಲೂರು ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಮಾರಣೋತ್ತರ ಪರೀಕ್ಷೆಗೆ ಒಳಪಡಿಸಿ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.