ಮದ್ದೂರು : ಹಾಲಿನ ಟ್ಯಾಂಕರ್‌ಗೆ ಬೈಕ್ ಹಿಂದಿನಿಂದ ಡಿಕ್ಕಿ - ಸ್ಥಳದಲ್ಲೇ ಒಬ್ಬ ಸಾವು..!

| N/A | Published : Feb 25 2025, 12:50 AM IST / Updated: Feb 25 2025, 04:03 AM IST

ಸಾರಾಂಶ

ಮದ್ದೂರು ಪಟ್ಟಣದ ಎಚ್.ಕೆ.ವೀರಣ್ಣಗೌಡ ನಗರದ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಶಂಕರಾ ಚಾರಿ ಪುತ್ರ ಪ್ರಮೋದ್ ಮೃತಪಟ್ಟವರು. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪ್ರಮೋದ್ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾನೆ.  

 ಮಂಡ್ಯ : ಹಾಲಿನ ಟ್ಯಾಂಕರ್‌ಗೆ ಬೈಕ್ ಹಿಂದಿನಿಂದ ಡಿಕ್ಕಿ ಹೊಡೆದು ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟು, ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮಲ್ಲಯ್ಯನ ದೊಡ್ಡಿ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಭಾನುವಾರ ರಾತ್ರಿ ಜರುಗಿದೆ.

ಮದ್ದೂರು ಪಟ್ಟಣದ ಎಚ್.ಕೆ.ವೀರಣ್ಣಗೌಡ ನಗರದ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಶಂಕರಾ ಚಾರಿ ಪುತ್ರ ಪ್ರಮೋದ್ (24) ಮೃತಪಟ್ಟವರು. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪ್ರಮೋದ್ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾನೆ. ಬೈಕ್ ಚಾಲನೆ ಮಾಡುತ್ತಿದ್ದ ದರ್ಶನ್ ತೀವ್ರವಾಗಿ ಗಾಯಗೊಂಡು ಈತನನ್ನು ಮಂಡ್ಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರಿಸ್ಥಿತಿ ಚಿಂತಾ ಜನಕವಾಗಿದೆ.

ಮೃತ ಪ್ರಮೋದ್ ಬೆಂಗಳೂರಿನ ಬೆಸ್ಕಾಂನಲ್ಲಿ ಹಂಗಾಮಿ ನೌಕರನಾಗಿ ಕೆಲಸ ಮಾಡುವ ಜೊತೆಗೆ ಉಳಿದ ದಿನಗಳಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದನು. ಬೈಕ್ ಚಾಲಕ ದರ್ಶನ್ ಎಳನೀರು ವ್ಯಾಪಾರಿಯಾಗಿದ್ದು, ಪ್ರಮೋದ್ ಮತ್ತು ದರ್ಶನ್ ಬೈಕ್‌ನಲ್ಲಿ ಕಾರ್ಯ ನಿಮಿತ್ತ ಮೈಸೂರಿಗೆ ತೆರಳಿ ಮದ್ದೂರಿಗೆ ವಾಪಸ್ಸಾಗುತ್ತಿದ್ದರು.

ಮಲ್ಲಯ್ಯನ ದೊಡ್ಡಿ ಗ್ರಾಮ ಸಮೀಪದ ಬೆಂಗಳೂರು- ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ರಾತ್ರಿ 7:30ರ ಸಮಯದಲ್ಲಿ ಮುಂದೆ ಹೋಗುತ್ತಿದ್ದ ಹಾಲಿನ ಟ್ಯಾಂಕರ್ ಚಾಲಕ ಎಡಕ್ಕೆ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಹಠಾತ್ ಬ್ರೇಕ್ ಹಾಕಿದಾಗ ಬೈಕ್‌ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನೆ ಬೀಗ ಹೊಡೆದು ಚಿನ್ನಾಭರಣ, ನಗದು ಕಳ್ಳತನ

ಹಲಗೂರು:  ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಬೀಗ ಹೊಡೆದು ನಗದು ಮತ್ತು ಚಿನ್ನ ಆಭರಣ ದೋಚಿರುವ ಘಟನೆ ಸಮೀಪದ ಹಾಡ್ಲಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.

ಫೆ.18ರಂದು ರತ್ನಮ್ಮ ಕೋಂ. ಲಿಂಗರಾಜು ತವರು ಮನೆ ಮಾಗನೂರಿಗೆ ತೆರಳಿದ್ದರು. ಫೆ.22ರಂದು ಮಧ್ಯಾಹ್ನ ಮನೆಗೆ ವಾಪಸ್‌ ಬಂದಾಗ ಮನೆ ಬೀಗ ಹೊಡೆದು ಕಳ್ಳತನ ಮಾಡಿರುವುದು ಗೊತ್ತಾಗಿದೆ.

ಹಲವು ದಿನಗಳಿಂದ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಹೊಂಚು ಹಾಕಿ ಕಳ್ಳರು ಮನೆಯಲ್ಲಿದ್ದ 55 ಸಾವಿರ ರು. ನಗದು, 3 ಗ್ರಾಂ ಚಿನ್ನ, ಎರಡು ಬೆಳ್ಳಿ ಬಟ್ಟಲು, ಒಂದು ದೇವಿ ಮುಖವಾಡ ಕಳುವು ಮಾಡಿ ಪರಾರಿಯಾಗಿದ್ದಾರೆ.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.