ಸಾರಾಂಶ
ಕಂಟೇನರ್ ಲಾರಿ ಮಳವಳ್ಳಿ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಕೆ.ಎಂ.ದೊಡ್ಡಿಯಿಂದ ಮಣಿಗೆರೆಗೆ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿಹೊಡೆದಿದೆ. ಡಿಕ್ಕಿಹೊಡೆದ ರಭಸಕ್ಕೆ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಭಾರತೀನಗರ : ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಸಮೀಪದ ಮಣಿಗೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊಂಬಯ್ಯರ ಪುತ್ರ ಮನುಕುಮಾರ್ (29) ಮೃತ ಯುವಕ.
ಕಂಟೇನರ್ ಲಾರಿ ಮಳವಳ್ಳಿ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಕೆ.ಎಂ.ದೊಡ್ಡಿಯಿಂದ ಮಣಿಗೆರೆಗೆ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿಹೊಡೆದಿದೆ. ಡಿಕ್ಕಿಹೊಡೆದ ರಭಸಕ್ಕೆ ಮನುಕುಮಾರ್ ತಲೆಗೆ ಗಂಭೀರವಾಗಿ ಪೆಟ್ಟುಬಿದ್ದು ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.
ತಕ್ಷಣ ಗಾಯಾಳುವನ್ನು ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲು ಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲು ಪಡಿಸಿದ ಅರ್ಧ ಗಂಟೆಯಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೆ.ಎಂ.ದೊಡ್ಡಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತನ ಪಂಚನಾಮೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಮೃತನ ಅಂತ್ಯ ಸಂಸ್ಕಾರ ಶನಿವಾರ ಮಧ್ಯಾಹ್ನ 3 ಗಂಟೆಯಲ್ಲಿ ಜರುಗಿತು. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಅಪರಿಚಿತ ಶವ ಪತ್ತೆ
ಶ್ರೀರಂಗಪಟ್ಟಣ: ಪಟ್ಟಣದ ಹಳೇ ರೈಲ್ವೆ ಸೇತುವೆ ಕೆಳಗೆ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸುಮಾರು 2 -೩ ದಿನಗಳ ಹಿಂದೆ ವ್ಯಕ್ತಿ ಮೃತ ಪಟ್ಟಿದ್ದು, ಮೃತನ ಗುರುತು ಪತ್ತೆಯಾಗಿಲ್ಲ. ಆತನ ಬಲಗೈ ಮೇಲೆ ಆರ್‌ವಿಎಸ್ ಎಂಬ ಹಸಿರು ಅಚ್ಚೆ, ಎಡಗೈ ಮೇಲೆ ರಾಮೇಗೌಡ ಎಂಬ ಅಚ್ಚೆ ಹಾಗೂ ಎದೆ ಭಾಗದ ಮೇಲೆ ಆಂಜನೇಯ ಸ್ವಾಮಿ ಹಸಿರು ಹಚ್ಚೆ ಹಾಕಿಸಿಕೊಂಡಿದ್ದಾನೆ. ಸಂಬಂಧ ಪಟ್ಟವರು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಮಾಹಿತಿ ನೀಡಿದ್ದಾರೆ. ಈ ಸಂಬಂದ ಶ್ರೀರಂಗಪಟ್ಟಣ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವೃದ್ಧೆಯಿಂದ ಚಿನ್ನದ ಸರ ಕಳವು
ಮಳವಳ್ಳಿ: ದೇವರ ದರ್ಶನಕ್ಕೆ ಬಂದಿದ್ದ ವೃದ್ಧೆಯಿಂದ ಚಿನ್ನದ ಸರ ಕಳವು ಮಾಡಿರುವ ಘಟನೆ ತಾಲೂಕಿನ ಬೆಳಕವಾಡಿ ಸಮೀಪದ ಸರಗೂರು ಹ್ಯಾಂಡ್ ಪೋಸ್ಟ್ ಮಹದೇಶ್ವರ ದೇವಸ್ಥಾನದಲ್ಲಿ ನಡೆದಿದೆ. ತಾಲೂಕಿನ ಅವ್ವೇರಹಳ್ಳಿಯ ಮಹದೇವಮ್ಮ ಚಿನ್ನದ ಸರ ಕಳೆದುಕೊಂಡ ವೃದ್ಧೆ. ಮಹದೇವಮ್ಮ ಕುಟುಂಬದ ಸದಸ್ಯರೊಂದಿಗೆ ಶುಕ್ರವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಪೂಜೆಗೆ ಬಂದಿದ್ದರು. ಸಾಕಷ್ಟು ಜನ ಸಂದಣಿ ವೇಳೆ ಸುಮಾರು 1.35 ಲಕ್ಷ ರು. ಬೆಲೆ ಬಾಳುವ 30 ಗ್ರಾಂ ಚಿನ್ನದ ಸರ ಕಳ್ಳತನವಾಗಿದೆ ಎಂದು ಬೆಳಕವಾಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.