ತಾಯಿ ನೀಡಿದ ದೂರನ್ನು ಸ್ವೀಕರಿಸದೆ ನಿರ್ಲಕ್ಷ್ಯ : ಪೊಲೀಸರ ಮೇಲಿನ ಸಿಟ್ಟಿಗೆ ವಿಧಾನಸೌಧ ಮುಂದೆ ಬೈಕ್‌ಗೆ ಬೆಂಕಿ ಇಟ್ಟ

| Published : Aug 15 2024, 01:49 AM IST / Updated: Aug 15 2024, 03:40 AM IST

ತಾಯಿ ನೀಡಿದ ದೂರನ್ನು ಸ್ವೀಕರಿಸದೆ ನಿರ್ಲಕ್ಷ್ಯ : ಪೊಲೀಸರ ಮೇಲಿನ ಸಿಟ್ಟಿಗೆ ವಿಧಾನಸೌಧ ಮುಂದೆ ಬೈಕ್‌ಗೆ ಬೆಂಕಿ ಇಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

ತಾಯಿ ನೀಡಿದ ದೂರನ್ನು ಸ್ವೀಕರಿಸದೆ ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ಆಕ್ರೋಶಗೊಂಡ ಯುವಕನೊಬ್ಬ ವಿಧಾನಸೌಧದ ಮುಂದೆ ಬೈಕ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

 ಬೆಂಗಳೂರು :  ತನ್ನ ತಾಯಿ ನೀಡಿದ ದೂರನ್ನು ಸ್ವೀಕರಿಸದೆ ಉಡಾಫೆ ತೋರಿದರು ಎಂದು ಆರೋಪಿಸಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಠಾಣೆ ಪೊಲೀಸರ ವಿರುದ್ಧ ವಿಧಾನಸೌಧದ ಮುಂದೆ ಪ್ರತಿಭಟನಾರ್ಥವಾಗಿ ಬೈಕ್‌ಗೆ ಬೆಂಕಿ ಇಟ್ಟು ಯುವಕನೊಬ್ಬ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು.

ಚಳ್ಳಕೆರೆ ನಿವಾಸಿ ಪೃಥ್ವಿರಾಜ್‌ ಪ್ರತಿಭಟನೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆತನನ್ನು ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಕೆಲ ಹೊತ್ತು ವಿಧಾನಸೌಧ ವ್ಯಾಪ್ತಿ ಆತಂಕ ನೆಲೆಸಿತ್ತು.

ಘಟನೆ ಹಿನ್ನೆಲೆ:

ಡಿಪ್ಲೋಮಾ ಪದವೀಧರ ಪೃಥ್ವಿರಾಜ್‌, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಸಮೀಪ ಬೆಟ್ಟಕ್ಕೆ ಬೆಂಗಳೂರಿನಿಂದ ಜೂ.1ರಂದು ಆತ ಚಾರಣಕ್ಕೆ ತೆರಳಿದ್ದ. ಆ ವೇಳೆ ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿ ತನ್ನ ಕುಟುಂಬದ ಜತೆ ಸಂಪರ್ಕ ಕಡಿತವಾಗಿತ್ತು. ಇದರಿಂದ ಆತಂಕಗೊಂಡ ಆತನ ತಾಯಿ, ಮರು ದಿನ ಚಳ್ಳಕೆರೆ ಠಾಣೆಗೆ ದೂರು ಕೊಡಲು ತೆರಳಿದ್ದರು. ಆ ವೇಳೆ ದೂರು ಸ್ವೀಕರಿಸದೆ ಪೊಲೀಸರು ಕಳುಹಿಸಿದ್ದರು. ಇದರಿಂದ ಬೇಸರಗೊಂಡ ಆತನ ತಾಯಿ, ಬೆಂಗಳೂರಿಗೆ ಬಂದು ಯಶವಂತಪುರ ಠಾಣೆಗೆ ತೆರಳಿ ಮಗನ ನಾಪತ್ತೆ ಬಗ್ಗೆ ದೂರು ನೀಡಿದರು. ಈ ದೂರಿಗೆ ಯಶವಂತಪುರ ಪೊಲೀಸರು ಸ್ಪಂದಿಸಿದರು. ಅಷ್ಟರಲ್ಲಿ ಜೂ.10ರಂದು ತನ್ನ ತಾಯಿಯನ್ನು ಪೃಥ್ವಿ ಸಂಪರ್ಕಿಸಿದ್ದಾನೆ.

ಜೂ.21ರಂದು ಯಶವಂತಪುರ ಠಾಣೆಗೆ ತಾಯಿ ಜತೆ ತೆರಳಿ ಪೃಥ್ವಿ ಹೇಳಿಕೆ ನೀಡಿ ದೂರನ್ನು ಇತ್ಯರ್ಥಗೊಳಿಸಿದ್ದಾನೆ. ಇದಾದ ಬಳಿಕ ಜೂ.23ರಂದು ಚಳ್ಳಕೆರೆ ಠಾಣೆಗೆ ಹೋಗಿ ತನ್ನ ತಾಯಿ ದೂರು ಯಾಕೆ ಸ್ವೀಕರಿಸಿಲ್ಲ ಎಂದು ಪೃಥ್ವಿ ಪ್ರಶ್ನಿಸಿದ್ದಾನೆ. ಆ ವೇಳೆ ಆತನ ಜತೆ ಪೊಲೀಸರು ದರ್ಪ ತೋರಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚಳ್ಳಕೆರೆ ಡಿವೈಎಸ್ಪಿ ಹಾಗೂ ಚಿತ್ರದುರ್ಗ ಜಿಲ್ಲೆ ಎಸ್ಪಿ ಅವರನ್ನು ಕೂಡ ಭೇಟಿಯಾಗಿ ಚಳ್ಳಕೆರೆ ಪೊಲೀಸರ ವಿರುದ್ಧ ಆತ ದೂರು ಸಲ್ಲಿಸಿದ್ದಾನೆ. ಆದರೆ ತನ್ನ ದೂರಿಗೆ ಚಿತ್ರದುರ್ಗ ಹಾಗೂ ಚಳ್ಳಕೆರೆ ಪೊಲೀಸರು ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಪೃಥ್ವಿ ಆರೋಪಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಆಡಳಿತ ವರ್ಗದ ಗಮನ ಸೆಳೆಯುವ ಸಲುವಾಗಿ ವಿಧಾನಸೌಧ ಮುಂದೆ ತನ್ನ ಎಲೆಕ್ಟ್ರಿಕ್‌ ಬೈಕ್‌ಗೆ ಬೆಂಕಿ ಹಚ್ಚಿ ಆತ ಪ್ರತಿಭಟನೆ ವ್ಯಕ್ತಪಡಿಸಿದ್ದಾನೆ. ಈ ವೇಳೆ ಆತನ್ನು ಪೊಲೀಸರು ವಶಕ್ಕೆ ಪಡೆಯಲು ತೆರಳಿದ್ದಾಗ ಚಳ್ಳಕೆರೆ ಪೊಲೀಸರ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಬಳಿಕ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಧಾನಸೌಧ ಠಾಣೆಗೆ ಕರೆದೊಯ್ದರು.