ಸಾರಾಂಶ
ಬಾಗಲಕೋಟೆ ಜಿಲ್ಲೆಯಲ್ಲಿ ಹೆಣ್ಣು ಮಗು ಎಂಬ ಕಾರಣಕ್ಕೆ ಗರ್ಭಪಾತ ಮಾಡುವ ವೇಳೆ ಗಂಡು ಮಗು ಎಂದು ತಿಳಿದು ಬಂದ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆ ಮಹಾಲಿಂಗಪುರದಲ್ಲಿ ನಡೆದಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಬಾಗಲಕೋಟೆ : ಗರ್ಭಪಾತದಿಂದ ಮಹಾರಾಷ್ಟ್ರದ ಮಿರಜ್ ಮೂಲದ ಗೃಹಿಣಿಯೊಬ್ಬಳು ಮೃತಪಟ್ಟ ಘಟನೆ ಇನ್ನೂ ಹಸಿರಿರುವಾಗಲೇ ಮತ್ತೊಂದು ಗರ್ಭಪಾತ ಪ್ರಕರಣ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಬೆಳಕಿಗೆ ಬಂದಿದೆ.
ಹೆಣ್ಣು ಮಗು ಎಂದು ಗರ್ಭಪಾತ ಮಾಡುವ ವೇಳೆ ಗಂಡು ಮಗು ಎಂಬುದು ತಿಳಿದುಬಂದಿದೆ. ಪಟ್ಟಣದ ಪಾಟೀಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಡಾ.ರಾಜೇಂದ್ರ ಪಾಟೀಲ್ ವಿರುದ್ಧ ದೂರು ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಮುಧೋಳ ತಾಲೂಕಿನ ರನ್ನಬೆಳಗಲಿ ಗ್ರಾಮದ 24 ವರ್ಷದ ಮಹಿಳೆಗೆ 14 ವಾರಗಳ ಭ್ರೂಣದ ಗರ್ಭಪಾತ ಮಾಡಲಾಗಿದೆ.
ಗರ್ಭಪಾತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಡಿಎಚ್‌ಒ ಸುವರ್ಣ ಕುಲಕರ್ಣಿ, ಮುಧೋಳ ಟಿಎಚ್‌ಒ ಮಲಘಾಣ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಡೆಲಿವರಿ ಥಿಯೇಟರ್, ಸ್ಕ್ಯಾನಿಂಗ್ ಸೆಂಟರ್, ಎಮ್ಆರ್ಡಿ ರೂಮ್ ಸೀಜ್ ಮಾಡಿದ್ದಾರೆ.