ಸಾರಾಂಶ
ಬೆಂಗಳೂರು : ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬ್ಲ್ಯಾಕ್ ಮೇಲ್ ಆರೋಪದಡಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಚರಿತ್ ಬಾಳಪ್ಪ ವಿರುದ್ಧ ಎರಡು ತಿಂಗಳ ಹಿಂದೆಯಷ್ಟೇ ಕಿರುತೆರೆ ನಟಿಯೊಬ್ಬರು ಲೈಂಗಿಕ ಕಿರುಕುಳ ಹಾಗೂ ಬ್ಲ್ಯಾಕ್ ಮೇಲ್ ಆರೋಪದಡಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಇತ್ತೀಚೆಗಷ್ಟೇ ಚರಿತ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗ ಚರಿತ್ ವಿರುದ್ಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಮತ್ತು ಬ್ಲ್ಯಾಕ್ ಮೇಲ್ ಆರೋಪದಡಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಏನಿದು ದೂರು?:
ಕೆಲ ವರ್ಷಗಳ ಹಿಂದೆ ಧಾರಾವಾಹಿ ಶೂಟಿಂಗ್ ನೋಡಲು ತೆರಳಿದ್ದ ಸಂತ್ರಸ್ತೆಗೆ ಚರಿತ್ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಪ್ರೇಮಾಂಕುರವಾಗಿತ್ತು. ಈ ನಡುವೆ ಚರಿತ್ ಬೇರೆ ಯುವತಿಯ ಜತೆಗೆ ಮದುವೆಯಾಗಿದ್ದರು. ಮದುವೆ ನಂತರವೂ ದೈಹಿಕ ಸಂಪರ್ಕ ಇರಿಸಿಕೊಳ್ಳುವಂತೆ ಸಂತ್ರಸ್ತೆಗೆ ಚರಿತ್ ಒತ್ತಾಯಿಸಿದ್ದರು. ಇದಕ್ಕೆ ಸಂತ್ರಸ್ತೆ ನಿರಾಕರಿಸಿದಾಗ ಆಕೆ ಕೆಲಸ ಮಾಡುವ ಸ್ಥಳ ಮತ್ತು ಮನೆ ಬಳಿ ಚರಿತ್ ಗಲಾಟೆ ಮಾಡಿದ್ದರು. ಈ ಸಂಬಂಧ ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಚರಿತ್ ಇನ್ನು ಮುಂದೆ ಆಕೆಯ ಸಹವಾಸಕ್ಕೆ ಹೋಗುವುದಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟು ಎರಡು ವರ್ಷ ಆಕೆಯ ತಂಟೆಗೆ ಹೋಗಿರಲಿಲ್ಲ
ವಿಚ್ಛೇದನದ ಬಳಿಕ ಬ್ಲ್ಯಾಕ್ ಮೇಲ್
ಮೂರು ವರ್ಷದ ಹಿಂದೆ ಪತ್ನಿಗೆ ವಿಚ್ಛೇದನ ನೀಡಿದ್ದ ಚರಿತ್ ಬಳಿಕ ಮತ್ತೆ ಸಂತ್ರಸ್ತೆಯನ್ನು ಭೇಟಿಯಾಗಿ ಪ್ರೀತಿಸುವಂತೆ ಬೆನ್ನುಬಿದ್ದಿದ್ದರು. ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಸಂತ್ರಸ್ತೆ ಒಪ್ಪದಿದ್ದಾಗ ಆಕೆಯ ಖಾಸಗಿ ಫೋಟೋ ಇರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಾರೆ. ಅಂತೆಯೇ ಬೆಳ್ಳಿ ವಸ್ತುಗಳು ಹಾಗೂ ದುಬಾರಿ ಸೀರೆಗಳನ್ನು ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಚರಿತ್ ಪದೇ ಪದೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರಿಂದ ಬೇಸತ್ತ ಸಂತ್ರಸ್ತೆ, ಅಮೃತಹಳ್ಳಿ ಪೊಲೀಸ್ ಠಾಣೆಗೆ ಚರಿತ್ ವಿರುದ್ಧ ದೂರು ನೀಡಿದ್ದರು. ಆದರೆ, ಘಟನಾ ಸ್ಥಳದ ಆಧಾರದ ಮೇಲೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ಪ್ರಕರಣ ವರ್ಗವಾಗಿದೆ. ಪ್ರಕರಣದ ದಾಖಲಾದ ಬೆನ್ನಲ್ಲೇ ಚರಿತ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.