ಸಾರಾಂಶ
ನಾಗಮಂಗಲ : ತಾಲೂಕಿನ ಬೆಳ್ಳೂರಿನಲ್ಲಿ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ಳೂರು ಪಟ್ಟಣದ ಇರ್ಫಾನ್ ಉಲ್ಲಾಖಾನ್ ಮತ್ತು ಸೈಯದ್ ಆಹಾದ್ ಬಂಧಿತರು. ಉಳಿದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತ ಬೆಳ್ಳೂರಿನ ಅಭಿಲಾಷ್ ಮೇಲೆ ಅನ್ಯಕೋಮಿನ ಯುವಕರ ಗುಂಪು ಸೋಮವಾರ ಸಂಜೆ ಲಾಂಗ್ ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಗಾಯಾಳು ಅಭಿಲಾಷ್‌ಗೆ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಬಂಧಿತ ಆರೋಪಿಗಳಿಬ್ಬರನ್ನು ಬುಧವಾರ ಬೆಳಗ್ಗೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರೆದುರು ಪೊಲೀಸರು ಹಾಜರು ಪಡಿಸಿದರು. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸುವಂತೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆಂದು ತಿಳಿದುಬಂದಿದೆ.
ಪಿಎಸ್‌ಐ ಅಮಾನತು: ಹಿಂದೂ ಯುವಕನ ಮೇಲೆ ಅನ್ಯ ಕೋಮಿನ ಯುವಕರ ಗುಂಪು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ಬಸವರಾಜು ಚಿಂಚೋಳಿ ಅವರನ್ನು ಸೇವೆಯಿಂದ ಅಮಾನತ್ತುಪಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅದೇಶ ಹೊರಡಿಸಿದ್ದಾರೆ.
ಪಟ್ಟಣದ ಗಂಗಾಮತಸ್ಥರ ಬೀದಿಯಲ್ಲಿ ಕಳೆದ ಶುಕ್ರವಾರ ರಾತ್ರಿ ಗಂಗಾಪರಮೇಶ್ವರಿ ಹಬ್ಬ ನಡೆಯುತ್ತಿತ್ತು. ಈ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತ ಅಭಿಲಾಷ್, ಸಹೋದರ ಹೇಮಂತ್ ಹಾಗೂ ಮಾವ ನಾಗೇಶ್ ಈ ಮೂವರೂ ತಮ್ಮ ಕಾರಿನಲ್ಲಿ ಮನೆಗೆ ಬರುತ್ತಿದ್ದರು. ನಾಲ್ವರು ಯುವಕರಿದ್ದ ಕಾರೊಂದನ್ನು ಓವರ್‌ಟೇಕ್ ಮಾಡಿದಕ್ಕಾಗಿ ಹಿಂಬಾಲಿಸಿಕೊಂಡು ಬಂದ ನಾಲ್ವರು ಅನ್ಯಕೋಮಿನ ಯುವಕರು ನಮ್ಮ ಕಾರನ್ನೇ ಓವರ್‌ಟೇಕ್ ಮಾಡ್ತಿಯಾ ಎಂದು ಅಭಿಲಾಷ್ ಜೊತೆ ಜಗಳವಾಡಿ ಧಮ್ಕಿ ಹಾಕಿದ್ದರು.
ನಂತರ ತಡರಾತ್ರಿ 1.30ರ ವೇಳೆಗೆ ಪುನಃ 40ಮಂದಿ ಗುಂಪಿನೊಂದಿಗೆ ಬಂದು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿಲ್ಲದೆ ಈದಿನ ಹಬ್ಬ ಮಾಡುತ್ತಿದ್ದೀರಿ. ಹಬ್ಬ ಮುಗಿಸಿದ ಮೇಲೆ ನಾವು ನಿಮಗೆ ಹಬ್ಬ ಮಾಡುತ್ತೇವೆಂದು ಬೆದರಿಕೆ ಹಾಕಿ ಹೋಗಿದ್ದರು.
ಇದರಿಂದ ಆತಂಕಗೊಂಡ ಅಭಿಲಾಷ್ ಕುಟುಂಬಸ್ಥರು ಬೆಳ್ಳೂರು ಪೊಲೀಸ್ ಠಾಣೆಗೆ ತೆರಳಿ ಬೆದರಿಕೆ ಹಾಕಿದ್ದ ಯುವಕರ ವಿರುದ್ಧ ದೂರು ನೀಡಲು ಮುಂದಾದರು. ಅಭಿಲಾಷ್ ಕುಟುಂಬಸ್ಥರಿಂದ ದೂರು ಪಡೆದು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದರೆ ಈ ಘಟನೆ ಇಷ್ಟು ದೊಡ್ಡಮಟ್ಟಕ್ಕೆ ಹೋಗುತ್ತಿರಲಿಲ್ಲ.
ಆದರೆ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರು. ಘಟನೆ ಸಂಭವಿಸಲು ಪೊಲೀಸರ ವೈಫಲ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಬೆಳ್ಳೂರು ಠಾಣೆಯ ಪಿಎಸ್‌ಐ ಬಸವರಾಜು ಚಿಂಚೋಳಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.
ಸಹಜ ಸ್ಥಿತಿಗೆ ಬಂದ ಬೆಳ್ಳೂರು: ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆಯಿಂದಾಗಿ ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆವರೆಗೂ ಬೆಳ್ಳೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ ಸ್ಥಳೀಯ ಜನರು ಆತಂಕಕ್ಕೊಳಗಾಗಿದ್ದರು.
ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಜೊತೆಗೆ ಶಾಂತಿ ನೆಮ್ಮದಿಗೆ ಯಾವುದೇ ಧಕ್ಕೆ ಉಂಟಾಗದಂತೆ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಸದ್ಯ ಬೆಳ್ಳೂರು ಪಟ್ಟಣ ಸಹಜ ಸ್ಥಿತಿಗೆ ಬಂದಿದ್ದು, ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರದು ವ್ಯಾಪಾರ ವಹಿವಾಟು ನಡೆಸಿದವು. ಜನ ಜೀವನ ಸಾಮಾನ್ಯವಾಗಿತ್ತು. ಮುನ್ನೆಚ್ಚರಿಯಾಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.