ಮನೆಯಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಆಕಸ್ಮಿಕವಾಗಿ ನೀರಿನ ಸಂಪಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರದಲ್ಲಿ ಶನಿವಾರ ನಡೆದಿದೆ. ಗ್ರಾಮದ ಸುಷ್ಮಾ ಮತ್ತು ಹರೀಶ್ ದಂಪತಿ ಪುತ್ರ ವಿನೀಶ್ (ವಿನು) (2) ಮೃತ ಬಾಲಕ.
ಪಾಂಡವಪುರ:
ಮನೆಯಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಆಕಸ್ಮಿಕವಾಗಿ ನೀರಿನ ಸಂಪಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಲಕ್ಷ್ಮೀಸಾಗರದಲ್ಲಿ ಶನಿವಾರ ನಡೆದಿದೆ.ಗ್ರಾಮದ ಸುಷ್ಮಾ ಮತ್ತು ಹರೀಶ್ ದಂಪತಿ ಪುತ್ರ ವಿನೀಶ್ (ವಿನು) (2) ಮೃತ ಬಾಲಕ.
ಮೃತ ಮಗುವಿನ ಪಾಲಕರು ಗ್ರಾಮದಲ್ಲಿ ಚಿಲ್ಲರೆ (ದಿನಸಿ) ಅಂಗಡಿ ನಡೆಸುತ್ತಿದ್ದರು. ಘಟನೆಗೂ ಮುನ್ನ ಮಗುವಿನ ತಂದೆ ಹರೀಶ್ ಕೆಲಸ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದಾರೆ. ತಾಯಿ ಮನೆಗೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಮಗು ಮನೆಯಲ್ಲಿ ಚೆಂಡಿನೊಂದಿಗೆ ಆಟವಾಡುತ್ತಿದ್ದಾಗ ಚೆಂಡು ಆಕಸ್ಮಿಕವಾಗಿ ಸಂಪಿಗೆ ಉರುಳಿದೆ.ಚೆಂಡನ್ನು ಹಿಂಬಾಲಿಸುತ್ತಾ ಹೋದ ಮಗು ಆಕಸ್ಮಿಕವಾಗಿ ಸಂಪಿಗೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮಗುವಿನ ಅಜ್ಜಿ ಮತ್ತು ತಾಯಿ ಮಗುವನ್ನು ತಂದೆ ಹೊರಗೆ ಕರೆದುಕೊಂಡು ಹೋಗಿರಬೇಕು ಎಂದು ಭಾವಿಸಿ ಸುಮ್ಮನಾಗಿದ್ದಾರೆ.
ಹರೀಶ್ ಮನೆಗೆ ಹಿಂದಿರುಗಿದಾಗ ಮಗು ಕಾಣದಿರುವುದಕ್ಕೆ ಗಾಬರಿಗೊಂಡು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಗು ಸಂಪಿನಲ್ಲಿ ಕಂಡು ಬಂದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಮಗು ಸಾವನ್ನಪ್ಪಿರುವುದನ್ನು ವೈದ್ಯರು ಧೃಡ ಪಡಿಸಿದ್ದಾರೆ. ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಶವ ಸಂಸ್ಕಾರ ನಡೆಸಲಾಯಿತು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.ಎರಡು ವರ್ಷದ ಮಗು ಸಂಪಿಗೆ ಬಿದ್ದು ಸಾವನ್ನಪ್ಪಿದ ಸುದ್ದಿ ಹರಡುತ್ತಿದ್ದಂತೆ ಗ್ರಾಮದ ಜನರು ಮನೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ವಿಧಿಯ ಆಟಕ್ಕೆ ಶಪಿಸಿದರು. ಗ್ರಾಮಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಪೋಷಕರುಕೆ.ಎಂ.ದೊಡ್ಡಿ:
ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಪೋಷಕರು ಆತನ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.ಮದ್ದೂರು ತಾಲೂಕು ಚಿಕ್ಕರಸಿನಕೆರೆ ಹೋಬಳಿಯ ಕ್ಯಾತಘಟ್ಟ ಗ್ರಾಮದ ಗಿರೀಗೌಡ ಅಲಿಯಾಸ್ ರಂಜಿತ್ (32) ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದನು.ಕಳೆದ ಜೂ.11ರಂದು ಗಿರೀಗೌಡ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಆಲಭುಜನಹಳ್ಳಿ ಬಳಿ ಬಜಾಜ್ ಚೇತಕ್ ಹಾಗೂ ಹೀರೋ ಹೋಂಡಾ ಸ್ಪೆಂಡರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಗಿರೀಗೌಡ ತೀವ್ರವಾಗಿ ಗಾಯಗೊಂಡಿದ್ದರು. ನಂತರ ಗಿರೀಗೌಡರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.ಮೆದುಳು ನಿಷ್ಕ್ರಿಯತೆಯಿಂದ ಬಳಲುತ್ತಿದ್ದ ಗಿರೀಗೌಡ ಚೇತರಿಸಿಕೊಳ್ಳುವುದು ಕಷ್ಟ ಸಾಧ್ಯ ಎಂದು ವೈದ್ಯರು ಪೋಷಕರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಸಂಬಂಧಿಕರು ಗಿರೀಗೌಡರ ಉಪಯುಕ್ತ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು.
ಅದರಂತೆ ವಿಧಿವಿಧಾನಗಳನ್ನು ಪೂರೈಸಿ ಆತನ ಅಂಗಾಂಗಗಳನ್ನು ದಾನ ಮಾಡಿದ ಬಳಿಕ ಶವವನ್ನು ವಾರಸುದಾರರಿಗೆ ನೀಡಲಾಯಿತು. ಶನಿವಾರ ಮಧ್ಯಾಹ್ನ ಗ್ರಾಮದಲ್ಲಿ ಮೃತ ಗಿರೀಗೌಡನ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯಿತು.ಮೃತ ಗಿರೀಗೌಡ ಅವರು ಪತ್ನಿ ಹಾಗೂ ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು, ಕುಟುಂಬಸ್ಥರ ಕಾರ್ಯವನ್ನು ಗ್ರಾಮಸ್ಥರು ಶ್ಲಾಷಿಸಿದ್ದಾರೆ. ಈ ಮೂಲಕ ಗಿರೀಗೌಡ ಸಾವಿನಲ್ಲಿ ಸಾರ್ಥಕತೆ ಮರೆದಿದ್ದಾರೆ.