ದಸರಾ ಯುವ ಸಂಭ್ರಮಕ್ಕೆ ವರ್ಣರಂಜಿತ ಚಾಲನೆ

| Published : Oct 07 2023, 02:14 AM IST

ದಸರಾ ಯುವ ಸಂಭ್ರಮಕ್ಕೆ ವರ್ಣರಂಜಿತ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ದಸರಾ ಯುವ ಸಂಭ್ರಮಕ್ಕೆ ವರ್ಣರಂಜಿತ ಚಾಲನೆ
ಕನ್ನಡಪ್ರಭ ವಾರ್ತೆ ಮೈಸೂರು ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿಯಾಗಿ ನಡೆಯುವ ಯುವ ಮನಸ್ಸುಗಳ ನೆಚ್ಚಿನ ಕಾರ್ಯಕ್ರಮ ಯುವ ಸಂಭ್ರಮಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ದೊರಕಿತು. ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಕಣ್ಣು ಕೋರೈಸುವ ವಿದ್ಯುತ್‌ ದೀಪಗಳ ಬೆಳಕಿನ ನಡುವೆ, ಯುವಕರ ಶಿಳ್ಳೆ, ಚಪ್ಪಾಳೆ, ಕೂಗಾಟದ ನಡುವೆ ವೇದಿಕೆ ಮೇಲಿದ್ದ ಗಣ್ಯರು ಡೋಲು ಬಾರಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾರಾ ಜೋಡಿಗಳಾದ ವರಿಷ್ಠ ಸಿಂಹ ಮತ್ತು ಹರಿಪ್ರಿಯ ಅವರು ಈ ಸಂಭ್ರಮಕ್ಕೆ ಸಾಕ್ಷಿಯಾಗಿ, ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ದೀಪಬೆಳಗಿಸಿ, ಡೊಳ್ಳು ಬಾರಿಸಿದರು. ಕಿವಿಗಡಚಿಕ್ಕುವ ಹಾಡುಗಳಿಗೆ ಯುವಕ ಯುವತಿಯರು ಹೆಜ್ಜೆ ಹಾಕುತ್ತಿದ್ದರೆ ವೇದಿಕೆ ಮುಂಭಾಗ ಸೇರಿದ್ದ ಸಾವಿರಾರು ಯುವಕ, ಯುವತಿಯರು ಕುಣಿದು ಕುಪ್ಪಳಿಸಿ ಸಂಭ್ರಮದ ಅಲೆಯಲ್ಲಿ ತೇಲಿದರು. ಇದೊಂದು ರೀತಿಯಲ್ಲಿ ಯುವ ದಸರಾದಂತೆಯೇ ಭಾಸವಾಯಿತು. ಯುವ ಸಮುದಾಯವೇ ತುಂಬಿದ್ದ ಅಂಗಳಕ್ಕೆ ತಾರಾ ದಂಪತಿಗಳು ಪ್ರವೇಶಿಸುತ್ತಿದ್ದಂತೆಯೇ ಎಲ್ಲರೂ ಉತ್ಸಾಹದಿಂದ ಶಿಳ್ಳೆ ಹಾಕಿದರು. ಯುವ ಜನಸ್ತೋಮದತ್ತ ಕೈ ಬೀಸಿದಾಗ ಶಿಳ್ಳೆ- ಚಪ್ಪಾಳೆ ಮುಗಿಲು ಮುಟ್ಟಿತ್ತು. ಬಳಿಕ ಮಾತನಾಡಿದ ನಟ ವಶಿಷ್ಠ ಸಿಂಹ, ನಾನು ಕಾಲೇಜು ವಿದ್ಯಾರ್ಥಿ ಆಗಿದ್ದಾಗ ನಿಮ್ಮಂತೆ ವೇದಿಕೆ ಮುಂದೆ ಕುಳಿತು ಯುವ ಸಂಭ್ರಮ ನೋಡುತ್ತಿದ್ದೆ. ಈ ವೇದಿಕೆಯಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದು. 2004 ರಲ್ಲಿ ಹಂಸಲೇಖ ಅವರ ಕಾರ್ಯಕ್ರಮಕ್ಕೆ ವಾಚ್‌ ಮನ್ ಕೈಯಲ್ಲಿ ಹೊಡೆಸಿಕೊಂಡು ಬಂದಿದ್ದೆ. ಹಾಡಬೇಕು ಎಂದು ಅವರ ಬಳಿ ಹೇಳಿದ್ದೆ. ಅವರು ಬೆಂಗಳೂರಿಗೆ ಬಾ ಎಂದಿದ್ದರು. ಅವರ ಮಾತು ಕೇಳಿ ಬೆಂಗಳೂರಿಗೆ ಹೋಗಿದ್ದಕ್ಕೆ ಇಂದು ನನ್ನ ಜೀವನವೇ ಬದಲಾಗಿದೆ. ನೀವೂ ಕೂಡ ನಿಮಗೆ ಸಿಗುವ ವೇದಿಕೆ ಬಳಸಿಕೊಂಡು ಸಾಧನೆ ಮಾಡಿ ಎಂದು ಅವರು ಸಲಹೆ ನೀಡಿದರು. ನಟಿ ಹರಿಪ್ರಿಯಾ ಮಾತನಾಡಿ, ಮೈಸೂರೆಂದರೆ ನನಗೆ ತುಂಬಾ ಇಷ್ಟ. ಮೊದಲು ನಿಮ್ಮ ಮನೆ ಮಗಳಾಗಿ ಬರುತ್ತಿದ್ದೆ. ಈಗ ಸೊಸೆಯಾಗಿ ಬಂದಿದ್ದೇನೆ. ಶಾಲಾ ದಿನಗಳಿಂದಲೇ ನಾನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಅದಕ್ಕಾಗಿ ನಟಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರು. ಹರಿಪ್ರಿಯ ಮತ್ತು ವಶಿಷ್ಠ ಸಿಂಹ ಅವರು ಸಿನಿಮಾ ಹಾಡು ಮತ್ತು ಡೈಲಾಗ್‌ಹೇಳಿ ಎಲ್ಲರನ್ನು ರಂಜಿಸಿದರು. ವಶಿಷ್ಠ ಸಿಂಹ ಅವರು ಮರೆತೇ ಹೋದೆನು ಹೊರಟ ಕಾರಣ, ಏತಕೆ ಬೊಗಸೆ ತುಂಬ ಆಸೆ ತುಂಬಿದೆ, ಕೂರಕ್‌ ಕುಕ್ಕರಹಳ್ಳಿ ಕೆರೆ ಹಾಡನ್ನು ಹಾಡಿ ರಂಜಿಸಿದರು. ಜತೆಗೆ ತಮ್ಮ ಹೊಸ ಚಿತ್ರದ ಡೈಲಾಗ್ ಹೇಳಿ ರಂಜಿಸಿದರು. ನಟಿ ಹರಿಪ್ರಿಯಾ ಲವ್ಲಿ ಸಿನಿಮಾದ ಡೈಲಾಗ್ ಹೇಳಿ ಯುವಕರ ಸಂಭ್ರಮಕ್ಕೆ ಕಿಚ್ಚು ಹಚ್ಚಿದರು. ಈ ತಾರಾ ದಂಪತಿಯ ಜುಗಲ್‌ಬಂದಿಗೆ ಯುವಜನತೆ ಮನಸೋತರು. ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮಾತನಾಡಿ, ಈ ಬಾರಿ ವೈಭವದಿಂದ ದಸರಾ ಆಯೋಜಿಸಲು ಚಿಂತಿಸಲಾಗಿತ್ತು. ಆದರೆ, ಪ್ರಕೃತಿ ನಮ್ಮ ನೆರವಿಗೆ ಬರಲಿಲ್ಲ. ಹೀಗಾಗಿ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ದೇಶದಲ್ಲಿ ಶೇ. 42ರಷ್ಟು ಯುವಕರೇ ಇದ್ದಾರೆ. ದೇಶದ ಭವಿಷ್ಯ ನಿಂತಿರುವುದು ಯುವಕರ ಮೇಲೆ. ಯುವಕರ ಭವಿಷ್ಯ ರೂಪಿಸಿ, ಅವರ ಕನಸು ನನಸು ಮಾಡಲು ಸರ್ಕಾರ ಬದ್ಧವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ಟಿ.ಎಸ್. ಶ್ರೀವತ್ಸ, ಕೆ. ಹರೀಶ್‌ ಗೌಡ, ಡಿ. ರವಿಶಂಕರ್, ಸಿ.ಎನ್. ಮಂಜೇಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪಾ, ನಗರ ಪಾಲಿಕೆ ಸದಸ್ಯೆ ಭಾಗ್ಯಾ ಮಹದೇಶ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಬಿ. ರಮೇಶ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಯುವ ಸಂಭ್ರಮ ಉಪ ಸಮಿತಿ ವಿಶೇಷಾಧಿಕಾರಿ ಸೀಮಾ ಲಾಟ್ಕರ್, ಕಾರ್ಯಾಧ್ಯಕ್ಷೆ ಶೈಲಜಾ, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ ಮೊದಲಾದವರು ಇದ್ದರು. ಸಾಂಸ್ಕೃತಿಕ ವೈಭವ ಮಾನಸಗಂಗೋತ್ರಿ ಆವರಣದ ಬಯಲು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ನೃತ್ಯ ವೈಭವ ಮೇಳೈಸಿತ್ತು. ವಿವಿಧ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿ ನೆರೆದಿದ್ದವರನ್ನು ಮೂಕವಿಸ್ಮಿತಗೊಳಿಸಿದರು. ಮೊದಲ ದಿನ ಸಾಂಸ್ಕೃತಿಕ ನೃತ್ಯ ವೈಭವವನ್ನು ಸಾವಿರಾರು ಮಂದಿ ಸವಿದರು. ನಗರದ ಹಲವು ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವಜನರು ಪ್ರತಿ ಹಾಡುಗಳಿಗೂ ಹುಚ್ಚೆದ್ದು ಕುಣಿದರು. ಮೈಸೂರು ದಸರಾ ವೈಭವ ಮತ್ತು ಮಾದರಿ ಕರ್ನಾಟಕವಾಗುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾತ್ರ ಬಿಂಬಿಸುವ ನೃತ್ಯವನ್ನು ಎಚ್.ಡಿ. ಕೋಟೆಯ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮನೋಜ್ಞವಾಗಿ ಪ್ರದರ್ಶಿಸಿದರು. ನಂಜನಗೂಡಿನ ಶ್ರೀಕಂಠೇಶ್ವರ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಹುಲಿಯನೇರಿ ಬಂದ ಮಲೆಯ ಮಾದಪ್ಪ ಹಾಡಿಗೆ ನೃತ್ಯ ಪ್ರದರ್ಶಿಸಿ ನೋಡುಗರನ್ನು ಭಕ್ತಿಯ ಲೋಕಕ್ಕೆ ಕೊಂಡೊಯ್ದರು. ನಂತರ ಮೈಸೂರಿನ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಪ್ರದಾಯಿಕ, ಶಾಸ್ತ್ರೀಯ ಕಲೆಗಳ ಬಗೆಗಿನ ನೃತ್ಯ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸಿತು.