ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಜೈಲಿನಿಂದಲೇ ರೌಡಿಶೀಟರ್‌ನಿಂದ ಸಾಕ್ಷ್ಯದಾರನಿಗೆ ಬೆದರಿಕೆ

| Published : Oct 14 2024, 01:22 AM IST / Updated: Oct 14 2024, 05:27 AM IST

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಜೈಲಿನಿಂದಲೇ ರೌಡಿಶೀಟರ್‌ನಿಂದ ಸಾಕ್ಷ್ಯದಾರನಿಗೆ ಬೆದರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ರೌಡಿಯೊಬ್ಬ ಕೊಲೆ ಪ್ರಕರಣವೊಂದರ ಸಾಕ್ಷಿದಾರನೊಬ್ಬನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬೆದರಿಕೆ ಹಾಕಿದ ಆರೋಪದಡಿ ಸಿಸಿಬಿಯಲ್ಲಿ ದೂರು ದಾಖಲಾಗಿದೆ.

 ಬೆಂಗಳೂರು : ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ರೌಡಿಯೊಬ್ಬ ಕೊಲೆ ಪ್ರಕರಣವೊಂದರ ಸಾಕ್ಷಿದಾರನೊಬ್ಬನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬೆದರಿಕೆ ಹಾಕಿದ ಆರೋಪದಡಿ ಸಿಸಿಬಿಯಲ್ಲಿ ದೂರು ದಾಖಲಾಗಿದೆ.

ಆಡುಗೋಡಿ ಎಲ್‌.ಆರ್‌.ನಗರ ಕ್ವಾರ್ಟ್ರಸ್‌ ನಿವಾಸಿ ಆರ್ಮುಗಂ ನೀಡಿದ ದೂರಿನ ಮೇರೆಗೆ ರೌಡಿ ಶೀಟರ್‌ ಸೋಮಶೇಖರ್‌ ಅಲಿಯಾಸ್‌ ಸೋಮು ಎಂಬಾತನ ವಿರುದ್ಧ ಜೀವ ಬೆದರಿಕೆ, ಕರ್ನಾಟಕ ಪ್ರಿಸನರ್ಸ್‌ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದೂರಿನಲ್ಲಿ ಏನಿದೆ:

ಆರ್ಮುಗಂ ನೀಡಿರುವ ದೂರಿನಲ್ಲಿ 2 ವರ್ಷದ ಹಿಂದೆ ಕೋರಮಂಗಲದಲ್ಲಿ ನನ್ನ ಸ್ನೇಹಿತ ಜೋಸೆಫ್‌ ಬಾಬು ಅಲಿಯಾಸ್‌ ಬಬ್ಲಿ ಎಂಬಾತನ ಕೊಲೆಯಾಗಿತ್ತು. ಸೆ.22ರಂದು ‘ಸಲಗ ಸೋಮ’ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಿಂದ ನನ್ನ ಖಾತೆಗೆ 3 ಬೆದರಿಕೆ ವಾಯ್ಸ್‌ ಮೆಸೇಜ್‌ಗಳು ಬಂದಿವೆ. 

ನಾದ, ಜೋಸೆಫ್‌ ಪತ್ನಿ ಹಾಗೂ ಸುನೀಲ ಅಲಿಯಾಸ್‌ ಸುಂಡಿಲಿಗೆ ಜೋಸೆಫ್‌ ಕೊಲೆ ಪ್ರಕರಣ ಸಂಬಂಧ ಸಾಕ್ಷಿ ನುಡಿಯದಂತೆ ಹೇಳು. ಇಲ್ಲವಾದರೆ, ನಾನು ಜೈಲಿನಲ್ಲಿ ಕುಳಿತೇ ಮಿಲ್ಟ್ರಿ ಸತೀಶ್‌ಗೆ ಹೊಡೆಸಿದ್ದು ಗೊತ್ತಲ್ಲಾ? ಈ ಮೆಸೇಜ್‌ ಅನ್ನು ಅವರಿಗೆ ತಲುಪಿಸದಿದ್ದರೆ ನಿನಗೂ ಒಂದು ಗತಿ ಕಾಣಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ಹೀಗಾಗಿ ನಾನು ಇಷ್ಟು ದಿನ ಹೆದರಿಕೊಂಡು ಮನೆಯಲ್ಲೇ ಇದ್ದೆ. ಇದೀಗ ಬಬ್ಲಿ ಪತ್ನಿ, ಸುನೀಲ ದೂರು ನೀಡುವಂತೆ ಹೇಳಿದರು. 

ಹೀಗಾಗಿ ದೂರು ನೀಡುತ್ತಿದ್ದೇನೆ. ನನಗೆ ರಕ್ಷಣೆ ಕೊಡಿ. ರೌಡಿ ಸೋಮ ಹಾಗೂ ಆತನ ಸಹಚರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ’ ಮನವಿ ಮಾಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.