ಲಾಡ್ಜ್‌ವೊಂದರ ರೂಮ್‌ನ ಲಾಕ್‌ ಮುರಿದು ಚಿನ್ನಾಭರಣ ಹಾಗೂ ಮೊಬೈಲ್‌ ಕಳವು ಮಾಡಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಲಾಡ್ಜ್‌ವೊಂದರ ರೂಮ್‌ನ ಲಾಕ್‌ ಮುರಿದು ಚಿನ್ನಾಭರಣ ಹಾಗೂ ಮೊಬೈಲ್‌ ಕಳವು ಮಾಡಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂಪಿಗೆಹಳ್ಳಿ ನಿವಾಸಿ ಅಬ್ದುಲ್‌ ರೆಹಮಾನ್‌(28) ಬಂಧಿತ. ಆರೋಪಿಯಿಂದ ₹3.15 ಲಕ್ಷ ಮೌಲ್ಯದ 35 ಗ್ರಾಂ ಚಿನ್ನದ ಸರ, 2 ಮೊಬೈಲ್‌ಗಳು ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಬಾಗಲೂರು ಠಾಣಾ ವ್ಯಾಪ್ತಿಯ ಲಾಡ್ಜ್‌ವೊಂದರ ರೂಮ್‌ನಲ್ಲಿ ಚಿನ್ನಾಭರಣ ಹಾಗೂ ಮೊಬೈಲ್‌ಗಳ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಬಾಗಲೂರು ಠಾಣಾ ವ್ಯಾಪ್ತಿಯ ಕಲ್ಯಾಣ ಮಂಟಪದಲ್ಲಿ ಮಾ.15-16ರಂದು ನಡೆದ ಸಂಬಂಧಿಕರ ಮದುವೆಗೆ ಮೂವರು ಮಹಿಳೆಯರು ಬಂದಿದ್ದರು. ಮದುವೆ ಮನೆಯವರು ಅತಿಥಿಗಳಿಗೆ ಲಾಡ್ಜ್‌ವೊಂದರಲ್ಲಿ ರೂಮ್‌ ಬುಕ್‌ ಮಾಡಿದ್ದರು. ಅದರಂತೆ ಮಾ.15ರಂದು ಮೂವರು ಮಹಿಳೆಯರು ರಾತ್ರಿ ಕಲ್ಯಾಣ ಮಂಟಪದಲ್ಲಿ ರಿಸೆಪ್ಷನ್‌ನಲ್ಲಿ ಭಾಗಿಯಾಗಿ ತಡರಾತ್ರಿ ಲಾಡ್ಜ್‌ನ ರೂಮ್‌ನಲ್ಲಿ ಮಲಗಿದ್ದರು. ಮಲಗುವ ಮುನ್ನ ಮಹಿಳೆಯೊಬ್ಬರು ತಮ್ಮ ಚಿನ್ನದ ಸರವನ್ನು ಬಿಚ್ಚಿ ಕಬೋರ್ಡ್‌ ಮೇಲಿಟ್ಟಿದ್ದರು. ಉಳಿದಿಬ್ಬರು ಮಹಿಳೆಯರು ಮೊಬೈಲ್‌ಗಳನ್ನು ಕಬೋರ್ಡ್‌ ಮೇಲಿಟ್ಟಿದ್ದರು.

ತಡರಾತ್ರಿ ದುಷ್ಕರ್ಮಿಯೊಬ್ಬ ರೂಮ್‌ನ ಬಾಗಿಲ ಲಾಕ್‌ ಮುರಿದು ರೂಮ್‌ ಪ್ರವೇಶಿಸಿ ಚಿನ್ನದ ಸರ ಮತ್ತು ಎರಡು ಮೊಬೈಲ್‌ ಕಳವು ಮಾಡಿ ಪರಾರಿಯಾಗಿದ್ದ. ಮುಂಜಾನೆ ಮಹಿಳೆಯರು ಎಚ್ಚರಗೊಂಡು ನೋಡಿದಾಗ ಕಳವು ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆರಳಚ್ಚು ಮುದ್ರೆ ಆಧರಿಸಿ ಬಂಧನ

ಪ್ರಕರಣದ ತನಿಖೆ ವೇಳೆ ಘಟನಾ ಸ್ಥಳದಲ್ಲಿ ಸಂಗ್ರಹಿಸಿದ್ದ ಬೆರಳಚ್ಚು ಮುದ್ರೆಯನ್ನು ಪರಿಶೀಲಿಸಿದಾಗ ಹಳೇ ಕಳ್ಳ ಅಬ್ದುಲ್‌ ರೆಹಮಾನ್‌ನ ಸುಳಿವು ಸಿಕ್ಕಿದೆ. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಮಾ.22ರಂದು ಹೆಗ್ಗಡೆ ನಗರದ ಸರ್ಕಲ್‌ ಬಳಿ ಅಬ್ದುಲ್‌ ರೆಹಮಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಲಾಡ್ಜ್‌ನಲ್ಲಿ ಕಳವು ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ.

 ಬಳಿಕ ಆರೋಪಿ ನೀಡಿದ ಮಾಹಿತಿ ಮೇರೆಗೆ ಆತನ ಮನೆಯಲ್ಲಿ ಇರಿಸಿದ್ದ ಚಿನ್ನದ ಸರ ಮತ್ತು ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಹೆಚ್ಚಿನ ವಿಚಾರಣೆ ವೇಳೆ ಆರೋಪಿ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದು, ಆ ಎರಡು ದ್ವಿಚಕ್ರ ವಾಹನಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.