ಸಾರಾಂಶ
ಬೆಂಗಳೂರು :ಸ್ನೇಹಿತನ ಹತ್ಯೆ ಆರೋಪ ಹೊತ್ತು ಪೊಲೀಸರಿಗೆ ಕೈಗೆ ಸಿಗದೆ 14 ವರ್ಷದಿಂದ ತಪ್ಪಿಸಿಕೊಂಡಿದ್ದ ಹೋಟೆಲ್ ಕೆಲಸಗಾರನೊಬ್ಬ ಆಧಾರ್ ಕಾರ್ಡ್ ನೀಡಿದ ಸುಳಿವಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸೆರೆಮನೆ ಸೇರಿದ್ದಾನೆ.
ಮಲ್ಲೇಶ್ವರ ಸಮೀಪ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವೈಯಾಲಿಕಾವಲ್ ನಿವಾಸಿ ಜಾನ್ ಎಂಬಾತನನ್ನು ಆರ್.ಟಿ.ನಗರ ಪೊಲೀಸರು 14 ವರ್ಷಗಳ ಬಳಿಕ ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಜಾನ್, ತನ್ನ ಪೋಷಕರ ಜತೆ ನೆಲೆಸಿದ್ದು, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ. 2011ರಲ್ಲಿ ಜಾನ್ ಸೇರಿದಂತೆ ನಾಲ್ವರು ತನ್ನ ಗೆಳೆಯ ಚೇತನ್ ಮೇಲೆ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದರು. ಬಳಿಕ ಈ ಪ್ರಕರಣದಲ್ಲಿ ಆತನ ಗೆಳೆಯರಾದ ಅರುಣ್, ಚಾಟಿರಾಜ್ ಹಾಗೂ ಮಣಿಕಂಠನನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಆದರೆ ಜಾನ್ ಪತ್ತೆಯಾಗಲಿಲ್ಲ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಜಾನ್‌ನನ್ನು ನಾಪತ್ತೆಯಾದ ಆರೋಪಿ ಎಂದು ಉಲ್ಲೇಖಿಸಿ ಬಂಧಿತ ಮೂವರ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಹ ಸಲ್ಲಿಸಿದ್ದರು.
ಆದರೆ, ಪ್ರಕರಣದ ಜಾಮೀನು ಪಡೆದು ಹೊರಬಂದ ಬಂಧಿತರ ಪೈಕಿ ಚಾಟಿ ರಾಜ್ ನ್ಯಾಯಾಲಯದ ವಿಚಾರಣೆಗೆ ಗೈರಾದ ಕಾರಣಕ್ಕೆ ಆತನ ಮೇಲೆ ವಾರೆಂಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಹಳೇ ಪ್ರಕರಣದ ಬಗ್ಗೆ ಕೆದಕಿದಾಗ ಜಾನ್ ನಾಪತ್ತೆ ಸಂಗತಿ ಗೊತ್ತಾಯಿತು. ಆಗ ಜಾನ್ ಪೋಷಕರ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ಆಧಾರ್ ಕಾರ್ಡ್ ಆಧರಿಸಿ ತನಿಖೆಗಿಳಿಸಿದ್ದಾರೆ.
ಕೊನೆಗೆ ಮಲ್ಲೇಶ್ವರದ ಹೋಟೆಲ್‌ನಲ್ಲಿ ಆರೋಪಿ ಖಾಕಿ ಬಲೆಗೆ ಬಿದ್ದಿದ್ದಾನೆ. ಸ್ನೇಹಿತನ ಹತ್ಯೆ ಬಳಿಕ ನಗರ ತೊರೆದು ಕೆಲ ವರ್ಷಗಳು ಆಂಧ್ರಪ್ರದೇಶದಲ್ಲಿ ಜಾನ್ ತಲೆಮರೆಸಿಕೊಂಡಿದ್ದ. ಕುಟುಂಬದವರ ಮೂಲಕ ಪ್ರಕರಣದ ತನಿಖೆ ಬಗ್ಗೆ ಆತ ಮಾಹಿತಿ ಪಡೆಯುತ್ತಿದ್ದ. ಕಾಲ ಸರಿದಂತೆ ಕೊಲೆ ಪ್ರಕರಣದ ಕಾವು ತಣ್ಣಗಾಯಿತು.ಪೊಲೀಸ್ ದಾಖಲೆಗಳಲ್ಲಿ ಪತ್ತೆಯಾಗದ ಆರೋಪಿ ಎಂದು ಉಲ್ಲೇಖಿತ ದಾಖಲೆಗಳು ಸೇರಿದವು. ಆದರೆ ಆತನ ಪಾಲಿಗೆ ಮತ್ತೊಬ್ಬ ಸ್ನೇಹಿತ ಕಂಟಕ ತಂದಿದ್ದಾನೆ. ಕೊಲೆ ಪ್ರಕರಣದ ವಿಚಾರಣೆಗೆ ಚಾಟಿ ರಾಜ ಗೈರಾದ ಕಾರಣಕ್ಕೆ ನ್ಯಾಯಾಲಯವು ಜಾಮೀನುರಹಿತ ವಾರೆಂಟ್ ಜಾರಿಗೊಳಿಸಿತ್ತು. ಆಗ ಹಳೇ ಪ್ರಕರಣಕ್ಕೆ ಮರುಜೀವ ಬಂದು ಅಜ್ಞಾತವಾಸಿಯಾಗಿದ್ದ ಜಾನ್ ಸೆರೆಮನೆ ಸೇರುವಂತಾಯಿತು.