ಸಾರಾಂಶ
ಬಿಎಂಟಿಸಿ ಬಸ್‌ಗಳನ್ನು ಪ್ರಯಾಣಿಕರ ಸೋಗಿನಲ್ಲಿ ಹತ್ತಿಕೊಂಡು ಪಿಕ್ ಪ್ಯಾಕೆಟ್ ಮಾಡುತ್ತಿದ್ದ ಐವರು ಚಾಲಾಕಿ ಕಳ್ಳಿಯರ ಗ್ಯಾಂಗ್‌ವೊಂದು ಮಹದೇವಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಎಂಟಿಸಿ ಬಸ್‌ಗಳನ್ನು ಪ್ರಯಾಣಿಕರ ಸೋಗಿನಲ್ಲಿ ಹತ್ತಿಕೊಂಡು ಪಿಕ್ ಪ್ಯಾಕೆಟ್ ಮಾಡುತ್ತಿದ್ದ ಐವರು ಚಾಲಾಕಿ ಕಳ್ಳಿಯರ ಗ್ಯಾಂಗ್‌ವೊಂದು ಮಹದೇವಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.ಆಂಧ್ರಪ್ರದೇಶದ ರಾಧಾ ಅಲಿಯಾಸ್ ಉಷಾ, ರಾಶಿ ಪೊಗುಲಾ ನಂದಿನಿ, ಸುಜಾತಾ, ಶಂಕರಮ್ಮ ಹಾಗೂ ಶಾಂತಮ್ಮ ಬಂಧಿತರಾಗಿದ್ದು, ಆರೋಪಿಗಳಿಂದ ₹30 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 120 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವೈಟ್‌ಫೀಲ್ಡ್, ಮಹದೇವಪುರ ಹಾಗೂ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಬಸ್‌ಗಳಲ್ಲಿ ಮೊಬೈಲ್ ಕಳ್ಳತನ ಕೃತ್ಯಗಳು ನಡೆದಿದ್ದವು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಪ್ರವೀಣ್ ಬಾಬು ನೇತೃತ್ವದ ತಂಡವು, ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಗರದ ಜನನಿಬಿಡ ಪ್ರದೇಶದ ಬಸ್ ನಿಲ್ದಾಣಗಳಲ್ಲಿ ಬಸ್‌ಗಳನ್ನು ಈ ಐವರು ಮಹಿಳೆಯರು ಹತ್ತಿಕೊಳ್ಳುತ್ತಿದ್ದರು. ನಂತರ ನೂಕುನುಗ್ಗಲು ಉಂಟು ಮಾಡಿ ಸಾರ್ವಜನಿಕರ ಬ್ಯಾಗ್ ಹಾಗೂ ಜೇಬಿನಲ್ಲಿ ಆರೋಪಿಗಳು ಮೊಬೈಲ್ ಕಳವು ಮಾಡುತ್ತಿದ್ದರು. ಹೀಗೆ ಕದ್ದ ಮೊಬೈಲ್‌ಗಳನ್ನು ದೇವನಹಳ್ಳಿ ಸಮೀಪ ತಾವು ನೆಲೆಸಿದ್ದ ಮನೆಯಲ್ಲಿ ಸಂಗ್ರಹಿಸಿ ನಂತರ ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡುತ್ತಿದ್ದರು.ಈ ಆರೋಪಿಗಳು ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಕಳೆದ ಎರಡ್ಮೂರು ವರ್ಷಗಳಿಂದ ಪಿಕ್ ಪಾಕೇಟ್‌ನಲ್ಲಿ ನಿರತರಾಗಿದ್ದರು. ಆದರೆ ಇದೇ ಮೊದಲ ಬಾರಿಗೆ ಪೊಲೀಸರಿಗೆ ಈ ಗ್ಯಾಂಗ್ ಸಿಕ್ಕಿಬಿದ್ದು ಜೈಲು ಸೇರಿದೆ. ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡೇ ಆರೋಪಿಗಳು ಕೃತ್ಯವೆಸಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.