ಟಾಪ್‌...ಅನಿಲ ಸೇವಿಸಿ ಸಾಫ್ಟ್‌ವೇರ್ ಉದ್ಯೋಗಿ ಆತ್ಮಹತ್ಯೆ

| Published : Aug 21 2024, 12:31 AM IST

ಸಾರಾಂಶ

ಜೀವನದಲ್ಲಿ ಜಿಗುಪ್ಸೆಗೊಂಡು ಹೀಲಿಯಂ ಅನಿಲ ಸೇವಿಸಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜೀವನದಲ್ಲಿ ಜಿಗುಪ್ಸೆಗೊಂಡು ಹೀಲಿಯಂ ಅನಿಲ ಸೇವಿಸಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಗಳವಾರ ನಡೆದಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಾಗ್ನಿಕ್‌ (24) ಮೃತ ದುರ್ದೈವಿ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೀಲಾದ್ರಿ ರಸ್ತೆಯ ರಾಯಲ್‌ ಇನ್‌ ಹೋಟೆಲ್‌ನಲ್ಲಿ ಯಾಗ್ನಿಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನ ರೂಮ್‌ಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೋಟೆಲ್ ಸಿಬ್ಬಂದಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಕಲೇಶಪುರ ತಾಲೂಕಿನ ಕಾಫಿ ಎಸ್ಟೇಟ್ ಮಾಲಿಕರ ಪುತ್ರನಾದ ಯಾಗ್ನಿಕ್‌, ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಈ ಮೊದಲು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ನೇಹಿತರ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಆತ, ವರ್ಕ್‌ ಫ್ರಮ್ ಹೋಂ ಕಾರಣಕ್ಕೆ ಊರಿಗೆ ತೆರಳಿದ್ದ. ಅಲ್ಲಿಂದಲೇ ಕೆಲಸ ಮಾಡುತ್ತಿದ್ದ ಯಾಗ್ನಿಕ್‌, ಇದೇ ತಿಂಗಳ 16 ರಂದು ಎಂಟೆಕ್ ಪರೀಕ್ಷೆ ಸಲುವಾಗಿ ನಗರಕ್ಕೆ ಬಂದು ನೀಲಾದ್ರಿ ರಸ್ತೆಯ ರಾಯಲ್ ಇನ್‌ ಹೋಟೆಲ್‌ನಲ್ಲಿ ತಂಗಿದ್ದ.

ಪೂರ್ವನಿಗದಿಯಂತೆ ಮಂಗಳವಾರ ಬೆಳಗ್ಗೆ ಆತ ರೂಮ್ ಖಾಲಿ ಮಾಡಬೇಕಿತ್ತು. ಆದರೆ ಮಧ್ಯಾಹ್ನ 12 ಗಂಟೆಯಾದರೂ ರೂಮ್‌ನಿಂದ ಹೊರಗೆ ಬಾರದ ಕಾರಣಕ್ಕೆ ಯಾಗ್ನಿಕ್ ಮೊಬೈಲ್‌ಗೆ ಹೋಟೆಲ್ ಸಿಬ್ಬಂದಿ ಕರೆ ಮಾಡಿದ್ದಾರೆ. ಆಗ ನಿರಂತರ ಕರೆಗಳಿಗೆ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಆತಂಕಗೊಂಡ ಸಿಬ್ಬಂದಿ, ಕೂಡಲೇ ಮೃತನ ರೂಮ್‌ಗೆ ತೆರಳಿ ಬಾಗಿಲು ಬಡಿದಿದ್ದಾರೆ. ಆಗಲೂ ಕೂಡ ಯಾವುದೇ ಪ್ರತಿಕ್ರಿಯೆ ಬಾರದೆ ಹೋದಾಗ ಕೊನೆಗೆ ಆ ರೂಮ್‌ನ ಮಾಸ್ಟರ್ ಕೀ ತಂದು ಬಾಗಿಲು ಸಿಬ್ಬಂದಿ ತೆರೆದಿದ್ದಾರೆ. ಆ ವೇಳೆ ಪ್ರಜ್ಞಾಹೀನನಾಗಿ ಆತ ಬಿದ್ದಿರುವುದನ್ನು ಕಂಡು ಆತಂಕಗೊಂಡಿದ್ದಾರೆ.

ಕೂಡಲೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅಂತೆಯೇ ಹೋಟೆಲ್‌ಗೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಬಲೂನ್‌ಗೆ ಗಾಳಿ ತುಂಬುವ ಹೀಲಿಯಂ ಅನಿಲ ಸೇವಿಸಿ ಯಾಗ್ನಿಕ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ ಆತನಿಗೆ ಹಣಕಾಸಿನ ಸಮಸ್ಯೆ ಇರಲಿಲ್ಲವೆಂಬುದು ಖಚಿತವಾಗಿದೆ. ಯಾಗ್ನಿಕ್ ಕುಟುಂಬ ಆರ್ಥಿಕ ಉತ್ತಮ ಸ್ಥಿತಿಯಲ್ಲಿದ್ದು, ಸಾಫ್ಟ್‌ವೇರ್ ಕಂಪನಿಯಲ್ಲಿ ಆತ ಸಹ ಕೈ ತುಂಬ ಸಂಬಳದ ಕೆಲಸಲ್ಲಿದ್ದ. ಹೀಗಾಗಿ ಪ್ರೇಮ ವೈಫಲ್ಯ ಅಥವಾ ಬೇರೆ ವೈಯಕ್ತಿಕ ಕಾರಣಕ್ಕೆ ಯಾಗ್ನಿಕ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.