ಸಾರಾಂಶ
9 ತಿಂಗಳು ಹೊತ್ತು ಜನ್ಮ ನೀಡಿ, ದೊಡ್ಡವನಾಗುವವರೆಗೆ ಲಾಲನೆ- ಪೋಷಣೆ ಮಾಡುವ ತಾಯಿಯನ್ನು ‘ಸಾಕ್ಷಾತ್ ದೇವರು’ ಎಂದು ಕರೆಯುತ್ತೇವೆ. ಆದರೆ ಅಂತಹ ಹೆತ್ತಮ್ಮನ ಮೇಲೆ ರಾಕ್ಷಸನೊಬ್ಬ ಅತ್ಯಾ*ರವೆಸಗಿರುವ ಅತ್ಯಂತ ಹೇಯ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ನವದೆಹಲಿ: 9 ತಿಂಗಳು ಹೊತ್ತು ಜನ್ಮ ನೀಡಿ, ದೊಡ್ಡವನಾಗುವವರೆಗೆ ಲಾಲನೆ- ಪೋಷಣೆ ಮಾಡುವ ತಾಯಿಯನ್ನು ‘ಸಾಕ್ಷಾತ್ ದೇವರು’ ಎಂದು ಕರೆಯುತ್ತೇವೆ. ಆದರೆ ಅಂತಹ ಹೆತ್ತಮ್ಮನ ಮೇಲೆ ರಾಕ್ಷಸನೊಬ್ಬ ಅತ್ಯಾ*ರವೆಸಗಿರುವ ಅತ್ಯಂತ ಹೇಯ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ತನ್ನ ತಾಯಿ ಬಾಲ್ಯದ ದಿನಗಳಲ್ಲಿ ಅಕ್ರಮ ಸಂಬಂಧ ಹೊಂದಿದ್ದಳು, ಆಕೆಗೆ ಶಿಕ್ಷೆ ನೀಡುತ್ತಿದ್ದೇನೆ ಎಂಬ ಕಾರಣವನ್ನು ಆತ ತನ್ನ ಅಸಹ್ಯದ ಕೆಲಸಕ್ಕೆ ಕೊಟ್ಟಿದ್ದಾನೆ!
65 ವರ್ಷದ ವೃದ್ಧ ತಾಯಿಯನ್ನು ಎರಡು ಬಾರಿ ಮಾನಭಂಗ ಮಾಡಿದ 39 ವರ್ಷದ ಫಿರೋಜ್ ಎಂಬ ಕಾಮಾಂಧನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ತನಗಾದ ಕರಾಳ ಅನುಭವವನ್ನು ಹಿಂಜರಿಕೆಯಿಂದಲೇ ತಾಯಿ ತನ್ನ ಕಿರಿಯ ಮಗಳ ಬಳಿ ಹೇಳಿಕೊಂಡಿದ್ದಾಳೆ. ಆಕೆ ಧೈರ್ಯ ತುಂಬಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಆಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಆಗಿದ್ದೇನು?:
ನಿವೃತ್ತ ಸರ್ಕಾರಿ ನೌಕರರೊಬ್ಬರ ಪತ್ನಿಯಾಗಿರುವ ಮಹಿಳೆ ಪತಿ, ಆರೋಪಿ ಪುತ್ರ ಹಾಗೂ ಕಿರಿಯ ಪುತ್ರಿ ಜತೆ ಹೌಜ್ ಖಾಜಿ ಬಡಾವಣೆಯಲ್ಲಿ ನೆಲೆಸಿದ್ದಾರೆ. ಈ ಮಹಿಳೆಗೆ ಹಿರಿಯ ಪುತ್ರಿಯೊಬ್ಬಳಿದ್ದು, ಆಕೆಯನ್ನು ವಿವಾಹ ಮಾಡಿಕೊಡಲಾಗಿದೆ. ಸಮೀಪದ ಬಡಾವಣೆಯಲ್ಲೇ ಆಕೆ ನೆಲೆಸಿದ್ದಾಳೆ. ಜು.17ರಂದು ಮಹಿಳೆ ತನ್ನ ಪತಿ ಹಾಗೂ ಕಿರಿಯ ಪುತ್ರಿ ಜತೆ ಸೌದಿ ಅರೇಬಿಯಾ ಪ್ರವಾಸಕ್ಕೆ ಹೋಗಿದ್ದಳು. ಆ ವೇಳೆ, ತಂದೆಗೆ ಕರೆ ಮಾಡಿದ ಆರೋಪಿ, ತಕ್ಷಣವೇ ದೆಹಲಿಗೆ ಮರಳುವಂತೆ ತಾಕೀತು ಮಾಡಿದ. ಬಾಲ್ಯದ ದಿನಗಳಲ್ಲಿ ತಾಯಿಯು ಅಕ್ರಮ ಸಂಬಂಧ ಹೊಂದಿದ್ದಳು. ಆದ ಕಾರಣ ಆಕೆಗೆ ವಿಚ್ಛೇದನ ನೀಡಬೇಕು ಎಂದು ಪಟ್ಟುಹಿಡಿದಿದ್ದ.
ಆ.1ರಂದು ಸೌದಿ ಅರೇಬಿಯಾ ಪ್ರವಾಸ ಮುಗಿಸಿ ಕುಟುಂಬ ದೆಹಲಿಗೆ ಮರಳಿತು. ಆಗ ತಾಯಿಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದ ಪುತ್ರ, ಬುರ್ಕಾ ತೆಗೆಸಿ, ಮನಸೋ ಇಚ್ಛೆ ಥಳಿಸಿದ. ಹೆದರಿ ಮನೆ ತೊರೆದ ಮಹಿಳೆ, ಹಿರಿಯ ಮಗಳ ಮನೆಯಲ್ಲಿ ನೆಲೆಸಿದ್ದಳು. ಆ.11ರಂದು ಆಕೆ ಮನೆಗೆ ಮರಳಿದ್ದಳು. ತಾನು ತನ್ನ ತಾಯಿ ಜತೆ ಖಾಸಗಿಯಾಗಿ ಮಾತನಾಡಬೇಕು ಎಂದು ರಾತ್ರಿ 9.30ರ ವೇಳೆಗೆ ಕೋಣೆಯೊಂದಕ್ಕೆ ಆತ ಕರೆದೊಯ್ದ. ಮಾತನಾಡುವ ಬದಲು, ಹಳೆಯ ಅಕ್ರಮ ಸಂಬಂಧಕ್ಕೆ ಶಿಕ್ಷೆ ನೀಡುತ್ತಿದ್ದೇನೆ ಎಂದು ಕೋಣೆಯ ಬಾಗಿಲು ಬಂದ್ ಮಾಡಿ ಅತ್ಯಾ*ರ ಮಾಡಿದ. ಆ.14ರ ರಾತ್ರಿ 3.30ರ ವೇಳೆಗೆ ತನ್ನ ಕೃತ್ಯವನ್ನು ಎರಡನೇ ಬಾರಿಗೆ ಮುಂದುವರಿಸಿದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮರು ದಿನ ತಾಯಿ ತನ್ನ ನೋವನ್ನು ಕಿರಿಯ ಪುತ್ರಿಯ ಬಳಿ ಹೇಳಿದಳು. ಕಿರಿಯ ಪುತ್ರಿಯನ್ನು ತಾಯಿಯನ್ನು ಠಾಣೆಗೆ ಕರೆದೊಯ್ದು ದೂರು ನೀಡಿದಳು. ಪ್ರಕರಣ ದಾಖಲಿಸಿದ ಪೊಲೀಸರು ಪುತ್ರನನ್ನು ಬಂಧಿಸಿದ್ದಾರೆ.