ಸಿಗ್ನಲ್‌ ಜಂಪ್ ಮಾಡಿದ ಲಾರಿಯೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಯುವತಿ ಸಾವು

| Published : Sep 29 2024, 01:34 AM IST / Updated: Sep 29 2024, 04:37 AM IST

ಸಾರಾಂಶ

ಊರಿಗೆ ಹೋಗಲು ಆಟೋದಲ್ಲಿ ತೆರಳುತ್ತಿದ್ದ ಯುವತಿಯೊಬ್ಬಳನನ್ನು ಲಾರಿಯೊಂದು ಬಲಿ ಪಡೆದಿದೆ. ಸಿಗ್ನಲ್‌ ಜಂಪ್‌ ಮಾಡಿ ಆಟೋಗೆ ಲಾರಿ ಡಿಕ್ಕಿ ಆಗಿದ್ದರಿಂದ ಯುವತಿ ಸಾವನ್ನಪ್ಪಿದ್ದಾಳೆ.

 ಬೆಂಗಳೂರು : ಸಿಗ್ನಲ್‌ ಜಂಪ್ ಮಾಡಿದ ಲಾರಿಯೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಯುವತಿ ಸಾವನ್ನಪ್ಪಿದ ಘಟನೆ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.

ಶಾಲಿನಿ (32) ಮೃತ ದುರ್ದೈವಿ. ಅಪಘಾತ ಸಂಬಂಧ ಲಾರಿ ಚಾಲಕ ಅಭಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಚಿನ್ನಪ್ಪ ಗಾರ್ಡನ್‌ನಿಂದ ಮೆಜೆಸ್ಟಿಕ್‌ಗೆ ಊರಿಗೆ ತೆರಳಲು ಬಸ್‌ ನಿಲ್ದಾಣಕ್ಕೆ ನಸುಕಿನ 4ರ ಸುಮಾರಿಗೆ ಶಾಲಿನಿ ತೆರಳುವಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಊರಿಗೆ ಹೊರಟಿದ್ದ ಯುವತಿ

ಚಿನ್ನಪ್ಪ ಗಾರ್ಡನ್‌ನಲ್ಲಿ ನೆಲೆಸಿದ್ದ ಶಾಲಿನಿ ತನ್ನೂರಿಗೆ ಹೋಗಲು ಮೆಜೆಸ್ಟಿಕ್‌ ಬಸ್ ನಿಲ್ದಾಣಕ್ಕೆ ಶನಿವಾರ ನಸುಕಿನ 4ರ ಸುಮಾರಿಗೆ ಆಟೋದಲ್ಲಿ ತೆರಳುತ್ತಿದ್ದರು. ಆಗ ಹೊಸೂರಿನಿಂದ ಹೆಬ್ಬಾಳಕ್ಕೆ ಕಬ್ಬಿಣ ತುಂಬಿಕೊಂಡು ಹೋಗುತ್ತಿದ್ದ ಲಾರಿ, ದಾರಿಯ ಮಧ್ಯದಲ್ಲಿ ಪೊಲೀಸ್ ತಿಮ್ಮಯ್ಯ ಜಂಕ್ಷನ್‌ನಲ್ಲಿ ಸಿಗ್ನಲ್ ಜಂಪ್ ಮಾಡಿ ಮುನ್ನುಗಿ ಆಟೋಗೆ ಗುದ್ದಿದೆ. ಆಗ ಆಟೋ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಶಾಲಿನಿ ಅವರಿಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.