ದಾಬಸ್‍ಪೇಟೆ : ಫ್ಲೈಓವರ್‌ ಬಳಿ ಮಲಗಿದ್ದ ವ್ಯಕ್ತಿಗೆ ಕಲ್ಲಿಂದ ಹಲ್ಲೆ ನಡೆಸಿ ಕೊಂದ ಅಸ್ವಸ್ಥೆ

| Published : Dec 09 2024, 01:15 AM IST / Updated: Dec 09 2024, 05:52 AM IST

Crime News

ಸಾರಾಂಶ

ಫ್ಲೈಓವರ್‌ ಬಳಿ ಮಲಗಿದ್ದ ವ್ಯಕ್ತಿ ಮೇಲೆ ಮಾನಸಿಕ ಅಸ್ವಸ್ಥೆಯೊಬ್ಬರು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಶನಿವಾರ ದಾಬಸ್‌ಪೇಟೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಹೆಜ್ಜಾಜಿ ಗ್ರಾಮದ ನರಸಿಂಹಮೂರ್ತಿ ಕೊಲೆಯಾದ ವ್ಯಕ್ತಿ. 

 ದಾಬಸ್‍ಪೇಟೆ : ಫ್ಲೈಓವರ್‌ ಬಳಿ ಮಲಗಿದ್ದ ವ್ಯಕ್ತಿ ಮೇಲೆ ಮಾನಸಿಕ ಅಸ್ವಸ್ಥೆಯೊಬ್ಬರು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಶನಿವಾರ ದಾಬಸ್‌ಪೇಟೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಹೆಜ್ಜಾಜಿ ಗ್ರಾಮದ ನರಸಿಂಹಮೂರ್ತಿ ಕೊಲೆಯಾದ ವ್ಯಕ್ತಿ.ರಾಮನಗರ ಜಿಲ್ಲೆ ಕುದೂರು ಮೂಲದ ಉಮಾದೇವಿ ಕೊಲೆ ಮಾಡಿದ ಮಾನಸಿಕ ಅಸ್ವಸ್ಥೆ.

ಘಟನಾ ವಿವರ: ಹಲವು ವರ್ಷಗಳಿಂದ ದಾಬಸ್‍ಪೇಟೆಯಲ್ಲಿಯೇ ಸಣ್ಣಪುಟ್ಟ ಕೆಲಸ ಮಾಡುತ್ತಾ ಉದ್ಧಾನೇಶ್ವರ ದೇವಾಲಯದ ಪಕ್ಕದ ಫ್ಲೈ ಓವರ್ ಬಳಿ ವಾಸಿಸುತ್ತಿದ್ದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಹೆಜ್ಜಾಜಿ ಗ್ರಾಮದ ನರಸಿಂಹಮೂರ್ತಿ ಎಂಬ ವ್ಯಕ್ತಿ ಮಲಗಿದ್ದ ವೇಳೆ ಆತನ ತಲೆ ಮೇಲೆ ಶನಿವಾರ ರಾತ್ರಿ 8:30 ರವೇಳೆ ರಾಮನಗರ ಜಿಲ್ಲೆ ಕುದೂರು ಮೂಲದ ಉಮಾದೇವಿ ಎಂಬಾಕೆ ಏಕಾಏಕಿ ಕಲ್ಲಿನಿಂದ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ಒದ್ದಾಟ ನಡೆಸುತ್ತಿದ್ದ ಆತನ ನೆರವಿಗೆ ಸ್ಥಳೀಯರು ಆಗಮಿಸಿ ಆ್ಯಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾರೆ. ಈ ಸಂಬಂಧ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೈದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಕೊಲೆಗೈದಿರುವ ಆರೋಪಿ ಉಮಾದೇವಿಯು ಮಾನಸಿಕ ಅಸ್ವಸ್ಥೆಯಾಗಿದ್ದು, ಎಲ್ಲೆಂದರಲ್ಲಿ ಓಡಾಟ ನಡೆಸುತ್ತಾ, ಜನರನ್ನು ಕಂಡರೆ ಬೈಗುಳಗಳನ್ನು ಆಡುತ್ತಾ ಓಡಾಡುತ್ತಿದ್ದಳೆಂದು ಸಾರ್ವಜನಿಕರು ತಿಳಿಸಿದ್ದು, ಅವಳ ಈ ನಡೆ ಕಂಡು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ, ಇದೇ ರೀತಿ ಹಲವರು ಫ್ಲೈ ಓವರ್ ಸೇರಿ ಹಲವೆಡೆ ವಾಸಿಸುತ್ತಿದ್ದು ಅವರನ್ನು ನಿರಾಶ್ರಿತ ಕೇಂದ್ರಕ್ಕೆ ರವಾನಿಸಿ ಸಾರ್ವಜನಿಕರ ಆತಂಕ ದೂರ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.