ಅಪ್ರಾಪ್ತೆಯನ್ನು ಮದುವೆಯಾಗಿ ಗರ್ಭಿಣಿ ಮಾಡಿದ ಅಪ್ರಾಪ್ತ..!

| Published : Nov 12 2025, 02:00 AM IST

ಸಾರಾಂಶ

ಅಪ್ರಾಪ್ತೆಯನ್ನು ವಿವಾಹವಾಗಿ ಆಕೆ ಗರ್ಭಿಣಿಯಾಗಲು ಕಾರಣವಾಗಿದ್ದ ಅಪ್ರಾಪ್ತನ ವಿರುದ್ಧ ಮದ್ದೂರು ಪೊಲೀಸರು ಪೋಕ್ಸೋ ಪ್ರಕರಣ ಮಾಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಅಪ್ರಾಪ್ತೆಯನ್ನು ವಿವಾಹವಾಗಿ ಆಕೆ ಗರ್ಭಿಣಿಯಾಗಲು ಕಾರಣವಾಗಿದ್ದ ಅಪ್ರಾಪ್ತನ ವಿರುದ್ಧ ಮದ್ದೂರು ಪೊಲೀಸರು ಪೋಕ್ಸೋ ಪ್ರಕರಣ ಮಾಡಿಕೊಂಡಿದ್ದಾರೆ.

ಪಟ್ಟಣದ ಲೀಲಾವತಿ ಬಡಾವಣೆಯ 11ನೇ ಕ್ರಾಸ್ ನಿವಾಸಿ ಬಾಲಕ ವಿರುದ್ಧ ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ವಿ.ಟಿ.ಹೇಮಾವತಿ ನೀಡಿದ ದೂರಿನ ಅನ್ವಯ ಆಬಿ.ಎನ್.ಎಸ್.ಕಾಯ್ದೆ ಅನ್ವಯ ಬಾಲ್ಯ ವಿವಾಹ ಹಾಗೂ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮಂಡ್ಯ ಜಿಲ್ಲಾ ತ್ವರಿತ ನ್ಯಾಯಾಲಯಕ್ಕೆ ಎಫ್ ಐ ಆರ್ ಸಲ್ಲಿಸಿದ್ದಾರೆ.

ಆರೋಪಿ ಬಾಲಕ ಕಳೆದ 2025ರ ಜನವರಿ 1ರಂದು ಅಪ್ರಾಪ್ತೆಯನ್ನು ಗುಟ್ಟಾಗಿ ವಿವಾಹವಾಗಿದ್ದನು. ಆ ನಂತರ 5 ತಿಂಗಳ ಗರ್ಭಿಣಿಯಾಗಿದ್ದ ಬಾಲಕಿಯನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿ ಆಗಿರುವುದು ದೃಢ ಪಟ್ಟಿದೆ.

ಈ ಬಗ್ಗೆ ಮಾಹಿತಿ ಅರಿತ ಬಾಲ್ಯ ವಿವಾಹ ನಿಷೇಧ ಅಧಿಕಾರಿ ವಿ.ಟಿ.ಹೇಮಾವತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವೃತ್ತ ಮೇಲ್ವಿಚಾರಕರಾದ ಎಸ್.ಜಿ. ಜಯಲಕ್ಷ್ಮಿ, ಮಕ್ಕಳರಕ್ಷಣಾ ಘಟಕದ ವಿಷಯ ನಿರ್ವಾಹಕ ಮನು ಕುಮಾರ್, ಆರೋಗ್ಯ ಇಲಾಖೆ ಸುರಕ್ಷಣಾಧಿಕಾರಿ ಉಷಾ ಭೇಟಿ ನೀಡಿ ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಬಾಲಕ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

ಕಿಕ್ಕೇರಿ:

ರಾಜ್ಯ ಹೆದ್ದಾರಿ ಬಿ.ಎಂ.ರಸ್ತೆಯ ಸ್ಮಶಾನದ ಬಳಿ ಅಪರಿಚಿತ ಶವ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ.

ದಾರಿ ಹೋಕರಿಗೆ ಬೆಳಗ್ಗಿನ ಜಾವ ಹೆದ್ದಾರಿ ಬದಿಯ ಪೆಟ್ರೋಲ್ ಬಂಕ್‌ ಎದುರುಗಡೆ ಮರಕ್ಕೆ ನೇಣು ಬಿಗಿದಿರುವ ರೀತಿಯಲ್ಲಿ ಪುರುಷನ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತ ವ್ಯಕ್ತಿ ಸುಮಾರು 5.7 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕುರುಚಲುಗಡ್ಡ, ದುಂಡು ಮುಖ, ಸಾಧಾರಣ ತೆಳ್ಳಗಿನ ಶರೀರ ಉಳ್ಳವನಾಗಿದ್ದಾನೆ.ಮೈಮೇಲೆ ಯಾವುದೇ ಅಂಗಿ ಧರಿಸದೆ, ಸಿಮೆಂಟು ಬಣ್ಣದಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಮೃತ ಶವವನ್ನು ಆದಿಚುಂಚನಗಿರಿಯ ಬಿಜಿಎಸ್‌ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಕಳೆದೆರಡು ದಿನಗಳಿಂದ ಈ ವ್ಯಕ್ತಿ ಸುತ್ತಮುತ್ತಲ ಪ್ರದೇಶದಲ್ಲಿ ತಿರುಗಾಡುತ್ತಿದ್ದನು. ಹಿಂದಿ ಮಾತನಾಡುತ್ತಿದ್ದನು ಎನ್ನಲಾಗಿದೆ. ಶವದ ಮಾಹಿತಿಗಾಗಿ ಕಿಕ್ಕೇರಿ ಪೊಲೀಸ್‌ ಠಾಣೆಗೆ ಮೊ-9480804861 ಸಂಪರ್ಕಿಸಲು ಕೋರಲಾಗಿದೆ.ಕೆಲಸಕ್ಕೆ ಹೋಗಿದ್ದ ಯುವತಿ ನಾಪತ್ತೆ

ಮದ್ದೂರು: ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದ ತಮ್ಮ ಪುತ್ರಿ ಜಗದೀಶ್ವರಿ (24) ನಾಪತ್ತೆಯಾಗಿದ್ದಾಳೆ ಎಂದು ತಾಯಿ ಮಹೇಶ್ವರಿ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗಾರ್ಮೆಂಟ್ಸ್ ಕಾರ್ಖಾನೆಗೆ ಕೆಲಸಕ್ಕೆ ಕಳೆದ ಅ.28 ರಂದು ಮನೆಯಿಂದ ಹೋದವಳು ನಾಪತ್ತೆಯಾಗಿದ್ದಾಳೆ ಎಂದು ಸಾಕು ತಾಯಿ ಮಹೇಶ್ವರಿ ದೂರಿನಲ್ಲಿ ತಿಳಿಸಿದ್ದಾರೆ. ಬಾಲಕಿಯ ಚಹರೆ, 5.3 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾಳೆ. ಮನೆಯಿಂದ ಹೊರಡುವಾಗ ಹಳದಿ ಬಣ್ಣದ ಚೂಡಿದಾರ್ ಧರಿಸಿದ್ದು, ಕನ್ನಡ, ತಮಿಳು, ತೆಲುಗು ಭಾಷೆಗಳನ್ನು ಬಲ್ಲವರಾಗಿದ್ದಾಳೆ. ಈಕೆಯ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.