ಸಾರಾಂಶ
ಬೆಂಗಳೂರು : ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಜಿಗುಪ್ಸೆಗೊಂಡು ತನ್ನ ಇಬ್ಬರು ಮಕ್ಕಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಬಳಿಕ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಡಿಗೇಹಳ್ಳಿಯ ಬಾಲಾಜಿ ಲೇಔಟ್ 4ನೇ ಅಡ್ಡರಸ್ತೆ ನಿವಾಸಿ ಕುಸುಮಾ ದಂಪತಿ ಪುತ್ರ ಶ್ರೇಯನಾ (5) ಹಾಗೂ ಪುತ್ರಿ ಚಾರ್ವಿ (2) ಕೊಲೆಯಾದ ದುರ್ವೈವಿಗಳು. ಮಕ್ಕಳ ತಾಯಿ ಕುಸುಮಾ (36) ನೇಣು ಹಾಕಿಕೊಂಡಿದ್ದಾರೆ. ಕೆಲಸ ಮುಗಿಸಿಕೊಂಡು ಬುಧವಾರ ರಾತ್ರಿ ಮೃತಳ ಪತಿ ಮನೆಗೆ ಮರಳಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2015ರಲ್ಲಿ ತುಮಕೂರು ಜಿಲ್ಲೆಯ ಸಾಫ್ಟ್‌ವೇರ್ ಉದ್ಯೋಗಿ ಸುರೇಶ್ ಹಾಗೂ ಮತ್ತಿಕೆರೆಯ ಕುಸುಮಾ ಪ್ರೇಮ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ವೈಟ್‌ಫೀಲ್ಡ್ ಹತ್ತಿರದ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಸುರೇಶ್ ಅವರು, ತಮ್ಮ ಕುಟುಂಬದ ಜತೆ ಕೊಡಿಗೇಹಳ್ಳಿಯ ಬಾಲಾಜಿ ಲೇಔಟ್‌ನ ಅಪಾರ್ಟ್‌ಮೆಂಟ್ ವಾಸವಾಗಿದ್ದರು. ಮದುವೆ ಬಳಿಕ ದಂಪತಿ ಅನ್ಯೋನ್ಯವಾಗಿಯೇ ಇದ್ದರು. ಆದರೆ, ಇತ್ತೀಚಿಗೆ ಸತಿ-ಪತಿ ಮನಸ್ತಾಪ ಮೂಡಿತ್ತು. ಇದೇ ವಿಚಾರವಾಗಿ ಸುರೇಶ್ ಹಾಗೂ ಕುಸುಮಾ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಎಂದಿನಂತೆ ಬುಧವಾರ ಬೆಳಗ್ಗೆ ಸುರೇಶ್ ಕೆಲಸಕ್ಕೆ ತೆರಳಿದ್ದರು. ಆಗ ಮನೆಯಲ್ಲೇ ಇದ್ದ ಮಕ್ಕಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಬಳಿಕ ಕುಸುಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲಸ ಮುಗಿಸಿಕೊಂಡು ರಾತ್ರಿ ಸುರೇಶ್ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.
ನನ್ನ ಸಾವಿಗೆ ನಾನೇ ಕಾರಣ: ಮೃತಳ ಮನೆಯಲ್ಲಿ ಮರಣ ಪತ್ರ ಪತ್ತೆಯಾಗಿದೆ. ಇದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಮೃತ ಕುಸುಮಾ ಉಲ್ಲೇಖಿಸಿರುವುದಾಗಿ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಕುಸುಮಾ ದಂಪತಿ ನಡುವೆ ಅಹಂ ಬೆಳೆದಿತ್ತು. ಸಣ್ಣಪುಟ್ಟ ವಿಷಯಗಳಿಗೆ ದಂಪತಿ ಮುನಿಸು ಮಾಡಿಕೊಂಡು ಜಗಳ ಆಡುತ್ತಿದ್ದರು. ಇದರಿಂದ ಬೇಸತ್ತ ಕುಸುಮಾ, ತಮ್ಮ ಪತಿಗೆ ಪಾಠ ಕಲಿಸಲು ಮಕ್ಕಳ ಕೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರಿಸಿದ್ದಳು ಎನ್ನಲಾಗಿದೆ. ಇದಕ್ಕೆ ತಮ್ಮ ಅತ್ತೆ (ಸುರೇಶ್ ತಾಯಿ) ಪುಣ್ಯಾರಾಧನೆ ದಿನವನ್ನೇ ಆಕೆ ಆಯ್ಕೆ ಮಾಡಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.