ಸಾರಾಂಶ
ಮದ್ದೂರು : ಹಳಿದಾಟಲು ಹೋದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಪಟ್ಟಣದ ಚನ್ನೇಗೌಡನ ದೊಡ್ಡಿ ಸಮೀಪದ ಬೆಂಗಳೂರು- ಮೈಸೂರು ಜೋಡಿ ರೈಲು ಮಾರ್ಗದಲ್ಲಿ ಗುರುವಾರ ರಾತ್ರಿ ಜರುಗಿದೆ.
ತಾಲೂಕಿನ ನಗರಕೆರೆ ಗ್ರಾಮದ ನಿಂಗೇಗೌಡ (49) ಮೃತ ವ್ಯಕ್ತಿ. ಗ್ರಾಮದ ತನ್ನ ಮನೆಯಿಂದ ಮದ್ದೂರಿಗೆ ಬಂದಿದ್ದ ನಿಂಗೇಗೌಡ ಕಾರ್ಯ ನಿಮಿತ್ತ ಚನ್ನೇಗೌಡನ ದೊಡ್ಡಿ ಬಂದು ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಹಳಿ ದಾಟುತ್ತಿದ್ದಾಗ ಗುರುವಾರ ರಾತ್ರಿ ಬೆಂಗಳೂರಿಂದ ಮೈಸೂರಿಗೆ ತೆರಳುತ್ತಿದ್ದ ಚಾಮುಂಡಿ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ತಲೆ ಮತ್ತು ಕಾಲುಗಳಿಗೆ ತೀವ್ರವಾಗಿ ಗಾಯಗಳಾದ ಪರಿಣಾಮ ಸ್ಥಳದಲ್ಲೇ ಅಸುನೀಗಿದ್ದಾರೆ.
ಈ ಸಂಬಂಧ ರೈಲ್ವೆ ಪೊಲೀಸರು ಸ್ಥಳಕ್ಕೆ ಪ್ರಕರಣ ದಾಖಲು ಮಾಡಿಕೊಂಡ ನಂತರ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತ ನಿಂಗೇಗೌಡನ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಿದ್ದಾರೆ.
ವ್ಯಕ್ತಿಯ ಗಮನ ಬೇರೆಡೆ ಸೆಳೆದು
ಕದೀಮರಿಂದ 5.5 ಲಕ್ಷ ರು. ಅಪಹರಣ
ಮಳವಳ್ಳಿ:ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದವರ ಗಮನ ಬೇರೆಡೆ ಸೆಳೆದ ಕದೀಮರು 5.5 ಲಕ್ಷ ರು. ಅಪಹರಿಸಿದ ಘಟನೆ ಪಟ್ಟಣದ ಸಿದ್ಧಾರ್ಥನಗರ ಬಳಿ ಗುರುವಾರ ಸಂಜೆ ನಡೆದಿದೆ.
ತಾಲೂಕಿನ ಕ್ಯಾತೇಗೌಡನದೊಡ್ಡಿಯ ಕೆಂಪೇಗೌಡ ಹಣ ಕಳೆದುಕೊಂಡ ವ್ಯಕ್ತಿ. ಪಟ್ಟಣದ ಮೈಸೂರು ರಸ್ತೆಯ ಕೆನರಾ ಬ್ಯಾಂಕ್ ನಲ್ಲಿ 7.5 ಲಕ್ಷ ರು. ಡ್ರಾ ಮಾಡಿಕೊಂಡು ತಮ್ಮ ಕಾರಿನ ಮುಂದಿನ ಸೀಟ್‌ನಲ್ಲಿ 5.5 ಲಕ್ಷ ರು. ಇದ್ದ ಬ್ಯಾಗ್ ಇಟ್ಟಿದರು. ಉಳಿದ ಹಣವನ್ನು ಕಾರಿನ ಬೋರ್ಡ್ ನಲ್ಲಿ ಇಟ್ಟುಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಭವನದ ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು.ಸಿದ್ದಾರ್ಥನಗರ ಬಳಿ ರಸ್ತೆ ಹಂಪ್ಸ್ ಸಮೀಪ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಆಯಿಲ್ ಸೋರಿಕೆಯಾಗುತ್ತಿದೆ ಎಂದು ಕೆಂಪೇಗೌಡರಿಗೆ ಹೇಳಿದ್ದಾರೆ. ಕೆಂಪೇಗೌಡ ಕಾರಿನಿಂದ ಇಳಿದು ನೋಡುತ್ತಿದ್ದಾಗ ಅವರಿಗೆ ಅರಿವಿಗೆ ಬಾರದಂತೆ ಮತ್ತೊಬ್ಬ ಮುಂದಿನ ಸೀಟ್ ನಲ್ಲಿದ್ದ 5.5 ಲಕ್ಷ ರು. ಕದ್ದು ಪಾರಾರಿಯಾಗಿದ್ದಾರೆ.
ಕಾರು ಚಾಲನೆ ಮಾಡಿಕೊಂಡು ಬ್ಯಾಗ್ ಗಮನಿಸಿದಾಗ ಹಣ ಇಲ್ಲದಿರುವ ಬಗ್ಗೆ ತಿಳಿದುಬಂದಿದೆ. ತಕ್ಷಣವೇ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಸತಿ ನಿಲಯವೊಂದರ ಬಳಿ ಸಿಸಿಟಿವಿಯಲ್ಲಿ ಕದೀಮರು ಬೈಕ್ ತಿರುಗಿಸಿಕೊಂಡು ಹೋಗಿರುವ ದೃಶ್ಯ ಸೆರೆಯಾಗಿದೆ. ಕದೀಮರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.