ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳಿಂದ ವ್ಯಕ್ತಿಗೆ ಚಾಕು ಇರಿತ : ಚಿಕಿತ್ಸೆ ಫಲಿಸದೆ ಸಾವು..!

| N/A | Published : Feb 21 2025, 11:45 PM IST / Updated: Feb 22 2025, 08:32 AM IST

ಸಾರಾಂಶ

 ವ್ಯಕ್ತಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಗುರುವಾರ ತಡರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಬಚ್ಚಿಕೊಪ್ಪಲು ಗ್ರಾಮದ ಗೇಟ್‌ ಬಳಿ ನಡೆದಿದೆ.

  ನಾಗಮಂಗಲ : ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳು ವ್ಯಕ್ತಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಗುರುವಾರ ತಡರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಬಚ್ಚಿಕೊಪ್ಪಲು ಗ್ರಾಮದ ಗೇಟ್‌ ಬಳಿ ಗುರುವಾರ ಸಂಜೆ ನಡೆದಿದೆ.

ತಾಲೂಕಿನ ಬಚ್ಚಿಕೊಪ್ಪಲು ಗ್ರಾಮದ ಪುಟ್ಟರಾಜು ಪುತ್ರ ಕುಮಾರ್ (40) ಎಂಬುವರೇ ಕಿಡಿಗೇಡಿಗಳಿಂದ ಇರಿತಕ್ಕೊಳಗಾಗಿ ಸಾವನ್ನಪ್ಪಿರುವ ನತದೃಷ್ಟ ವ್ಯಕ್ತಿಯಾದರೆ, ಪಾಂಡವಪುರ ತಾಲೂಕಿನ ಕಾಳೇನಹಳ್ಳಿಯ ಚಂದನ್, ಪ್ರಜ್ವಲ್ ಹಾಗೂ ಮಧುಸೂಧನ್ ಸೇರಿ ಒಟ್ಟು 7 ಮಂದಿ ಕಿಡಿಗೇಡಿಗಳು ಚಾಕುವಿನಿಂದ ಇರಿದಿರುವ ಆರೋಪಿಗಳು.

ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಕುಮಾರ್ ಬೆಂಗಳೂರಿನಿಂದ ಬಂದು ಸ್ವಗ್ರಾಮದಲ್ಲಿ ನೆಲೆಸಲು ಹೆದ್ದಾರಿ ಬದಿಯ ಸಾಮಕಹಳ್ಳಿ ಗ್ರಾಮದ ಬಳಿ ತಮ್ಮ ಜಮೀನಿನಲ್ಲಿ ಹೊಸದಾಗಿ ಅಂಗಡಿ ಮಳಿಗೆ ನಿರ್ಮಿಸುತ್ತಿದ್ದರು. ಬುಧವಾರ ಸಂಜೆ ಸ್ವಗ್ರಾಮ ಬಚ್ಚಿಕೊಪ್ಪಲಿಗೆ ತಮ್ಮ ಪ್ಯಾಸೆಂಜರ್ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ಕುಮಾರ್ ಹೆದ್ದಾರಿಯಿಂದ ಏಕಾಏಕಿ ಬಲಕ್ಕೆ ತಿರುವು ಪಡೆದರೆಂಬ ಕಾರಣಕ್ಕೆ ಹಿಂದಿನಿಂದ ಗೂಡ್ಸ್ ವಾಹನದಲ್ಲಿದ್ದ ಬರುತ್ತಿದ್ದ ಮೂವರು ಯುವಕರು ಗಲಾಟೆ ಮಾಡಿದ್ದಾರೆನ್ನಲಾಗಿದೆ.

ಇಷ್ಟಕ್ಕೆ ಸುಮ್ಮನಿರದ ಮೂವರು ಯುವಕರು ಸೇಡು ತೀರಿಸಿಕೊಳ್ಳುವ ಸಲುವಾಗಿ ಗುರುವಾರ ಮಧ್ಯಾಹ್ನ ತಮ್ಮ ಜೊತೆಗೆ ಮತ್ತೆ ನಾಲ್ವರು ಯುವಕರನ್ನು ಕರೆತಂದು ಹೆದ್ದಾರಿ ಬದಿಯ ಬಚ್ಚಿಕೊಪ್ಪಲು ಗೇಟ್ ಮತ್ತು ಸಾಮಕಹಳ್ಳಿ ಗ್ರಾಮದ ಸಮೀಪವಿರುವ ಮೂರ್‍ನಾಲ್ಕು ಟೀ ಅಂಗಡಿಗಳ ಬಳಿ ರಿಕ್ಷಾ ಚಾಲಕ ಕುಮಾರ್ ಬರುವಿಕೆಗಾಗಿ ಹೊಂಚು ಹಾಕಿ ಕುಳಿತಿದ್ದರು ಎಂದು ಹೇಳಲಾಗಿದೆ.

ಗುರುವಾರ ಸಂಜೆ 4 ಗಂಟೆ ಸಮಯದಲ್ಲಿ ಸಾಮಕಹಳ್ಳಿ ಬಳಿ ನಿರ್ಮಿಸುತ್ತಿರುವ ಅಂಗಡಿ ಮಳಿಗೆ ಸಮೀಪ ಕುಮಾರ್ ಇರುವುದನ್ನು ಕಂಡ ಯುವಕರ ಗುಂಪು ಏಕಾಏಕಿ ಮುಗಿಬಿದ್ದು ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಮೂರ್‍ನಾಲ್ಕು ಬಾರಿ ಇರಿದು ಪರಾರಿಯಾಗಲು ಯತ್ನಿಸಿದ್ದಾರೆ.

ಮೂವರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು:

ಸ್ಥಳದಲ್ಲಿದ್ದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್‌ನನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿ ಪರಾರಿಯಾಗುತ್ತಿದ್ದ 7 ಮಂದಿ ಪುಂಡರ ಪೈಕಿ ಮೂವರನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆಗೆ ಮುಂದಾದರು.

ಆಸ್ಪತ್ರೆಯಲ್ಲಿ ಕುಮಾರ್ ಸಾವು:

ಘಟನೆಯಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಕುಮಾರ್‌ನನ್ನು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ತಡರಾತ್ರಿ 2 ಗಂಟೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಶವಾಗಾರದಲ್ಲಿ ಶುಕ್ರವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಮಾರ್ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಡಿವೈಎಸ್‌ಪಿ ಬಿ.ಚಲುವರಾಜು, ವೃತ್ತ ನಿರೀಕ್ಷಕ ನಿರಂಜನ್ ಮತ್ತು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಂದ್ರ ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ಘಟನೆ ಸಂಬಂಧ ಮೃತ ಕುಮಾರ್ ತಂದೆ ಪುಟ್ಟರಾಜು ನೀಡಿರುವ ದೂರಿನ್ವಯ ಪ್ರಕರಣ ದಾಖಲಿಸಿಕೊಂಡಿರುವ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು, ಈಗಾಗಲೇ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಪರಾರಿಯಾಗಿರುವ ನಾಲ್ಕು ಮಂದಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.