ಸಾರಾಂಶ
ಬೆಂಗಳೂರು : ತಾನು ಕೆಲಸ ಮಾಡುತ್ತಿದ್ದ ನಿವೃತ್ತ ಸೇನಾಧಿಕಾರಿ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಕೆಲಸಗಾರನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶ ಮೂಲದ ಪಂಕಜ್ ಕುಮಾರ್ ಮಿಶ್ರಾ(30) ಬಂಧಿತ. ಆರೋಪಿಯಿಂದ 12 ಲಕ್ಷ ರು. ಮೌಲ್ಯದ 141 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಸರ್ಜಾಪುರ ಮುಖ್ಯರಸ್ತೆ ನಿವಾಸಿ ಪುಷ್ಕರ್ ರಾಜ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?
ದೂರುದಾರ ಪುಷ್ಕರ್ ರಾಜ್ ಅವರು ನಿವೃತ್ತ ಸೇನಾಧಿಕಾರಿಯಾಗಿದ್ದು, ಸರ್ಜಾಪುರ ಮುಖ್ಯರಸ್ತೆಯಲ್ಲಿ ಕುಟುಂಬದ ಜತೆಗೆ ನೆಲೆಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಆರೋಪಿ ಪಂಕಜ್, ಪುಷ್ಕರ್ ರಾಜ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಮಾ.4ರಂದು ಪುಷ್ಕರ್ ರಾಜ್ ಅವರು ಕಾರ್ಯ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರು. ವಾಪಾಸ್ ಬರುವ ವೇಳೆ ಪಂಕಜ್ ಮನೆಯಲ್ಲಿ ಇರಲಿಲ್ಲ. ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪಂಕಜ್ ಮೇಲೆ ಅನುಮಾನಗೊಂಡು ದೂರು:
ಅನುಮಾನಗೊಂಡು ಪುಷ್ಕರ್ ಅವರು ಮನೆಯ ಬೀರು ಪರಿಶೀಲಿಸಿದಾಗ ಸುಮಾರು 300 ಗ್ರಾಂ ಚಿನ್ನಾಭರಣ ಕಳ್ಳತನವಾಗಿರುವುದು ಕಂಡು ಬಂದಿದೆ. ಈ ನಡುವೆ ಏಕಾಏಕಿ ಪಂಕಜ್ ಮನೆಯಿಂದ ನಾಪತ್ತೆಯಾದ ಹಿನ್ನೆಲೆಯಲ್ಲಿ ಆತನ ಮೇಲೆ ಅನುಮಾನಗೊಂಡು ಪುಷ್ಕರ್ ರಾಜ್ ಬೆಳ್ಳಂದೂರು ಪೊಲೀಸ್ ಠಾಣೆಗೆ ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಬಂಧನ:
ಪ್ರಕರಣ ದಾಖಲಾದ ಬೆನ್ನಲ್ಲೇ ವಿವಿಧ ಆಯಾಮಗಳಲ್ಲಿ ತನಿಖೆ ಮಾಡಿದ ಪೊಲೀಸರು ಆರೋಪಿ ಪಂಕಜ್ ಮಧ್ಯಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ಪೊಲೀಸರ ಒಂದು ತಂಡ ಮಧ್ಯಪ್ರದೇಶದ ಶಾಹಡೋಲ್ ಜಿಲ್ಲೆಯ ಜಯದ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್‌ವೊಂದರಲ್ಲಿ ತಲೆಮರೆಸಿಕೊಂಡಿದ್ದ ಪಂಕಜ್‌ನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಬಳಿಕ ವಿಚಾರಣೆ ಮಾಡಿದಾಗ ಮನೆ ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಪಂಕಜ್, ಮನೆ ಮಾಲೀಕ ಪುಷ್ಕರ್ ರಾಜ್ ಅವರ ಮನೆಯಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ 141 ಗ್ರಾಂ ಚಿನ್ನಾಭರಣಗಳನ್ನು ಸಹಡೋರ್ ಜಿಲ್ಲೆಯ ಮಣಪ್ಪುರಂ ಗೋಲ್ಡ್‌ನಲ್ಲಿ ಮಾರಾಟ ಮಾಡಿದ್ದ. ಆ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ಸದ್ಯ ಆರೋಪಿ ಪಂಕಜ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.