ಸಾರಾಂಶ
ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬೆಂಗಳೂರ ಕಡೆಯಿಂದ ಸಾರಿಗೆ ಬಸ್ ಸ್ಯಾಂಜೋ ಆಸ್ಪತ್ರೆ ಬಳಿ ಸರ್ವೀಸ್ ರಸ್ತೆಗೆ ತಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
ಮಂಡ್ಯ : ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ವಿದ್ಯಾರ್ಥಿಗಳು ಸೇರಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಗರದ ಹೊರ ವಲಯದ ಸ್ಯಾಂಜೋ ಆಸ್ಪತ್ರೆ ಬಳಿ ನಡೆದಿದೆ.
ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬೆಂಗಳೂರ ಕಡೆಯಿಂದ ಸಾರಿಗೆ ಬಸ್ ಸ್ಯಾಂಜೋ ಆಸ್ಪತ್ರೆ ಬಳಿ ಸರ್ವೀಸ್ ರಸ್ತೆಗೆ ತಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ತಕ್ಷಣ ಎಲ್ಲರನ್ನೂ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಸ್ಸಿನಲ್ಲಿ ಮಹಿಳೆಯರು, ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಎಂದು ಗೊತ್ತಾಗಿದೆ. ಐದಾರು ಮಂದಿಗೆ ಹೆಚ್ಚಿನ ಗಾಯವಾಗಿದ್ದು, ಕೆಲವರಿಗೆ ಸಣ್ಣಪುಟ್ಟಗಳಾಗಿವೆ. ಇನ್ನು ಕೆಲವರು ಯಾವುದೇ ಗಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಕೆ.ಎಲ್.ಸೌಮ್ಯ, ಎಸ್.ಶಿಲ್ಪ, ಸೂಕ್ತ, ಅನುಷಾ, ಛಾಯಾನಂದ, ಹೇಮಾದ್ರಿ, ರೇಷ್ಮ, ಉಷಾ, ತನುಷಾ, ಗಂಗುಬಾಯಿ, ಮಹದೇವಮ್ಮ, ವರಲಕ್ಷ್ಮಿ, ಮೇಘ, ಲೀಲಾವತಿ, ಮಮತ, ರಾಮಚಂದ್ರು, ಗಿರಿಗೌಡ, ಆರ್.ಮೋಹಿತ್, ಎನ್.ಮಾದಪ್ಪ, ನಾಗೇಶ್, ಶೇಖರ್ , ಖಾಲಿದ್, ಮಲ್ಲಿಕಾರ್ಜುನ್, ಗೋಪಾಲ, ಉದಯ್, ಸಚಿನ್ , ಬೀರೇಶ, ಯೋಗೇಶ, ಕೃಷ್ಣ, ಯಶವಂತ, ಚಿಕ್ಕಮಾದು ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರ್ವೀಸ್ ರಸ್ತೆಯಲ್ಲಿ ಕ್ಯಾಂಟರ್ ನಿಂತಿತ್ತು. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಚಾಲಕ ಬಸ್ಸನ್ನು ಪಕ್ಕಕ್ಕೆ ತಿರುಗಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ಕ್ಯಾಂಟರ್‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಸರ್ವೀಸ್ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರನೊಬ್ಬ ಉರುಳಿಬಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಗಳುಗಳನ್ನು ಮಿಮ್ಸ್ ಆಸ್ಪತ್ರೆಗೆ ಸಾಗಿಸಿದರು. ಸ್ಥಳಕ್ಕೆ ಶಾಸಕ ಪಿ. ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹೆದ್ದಾರಿಯಲ್ಲಿ ಕಳಪೆ ಕಾಮಗಾರಿಯಿಂದ ಅವಘಡ: ಶಾಸಕ ರವಿಕುಮಾರ್
ಮಂಡ್ಯ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಪಿ.ರವಿಕುಮಾರ್ ಮಾತನಾಡಿ, ಬೆಂಗಳೂರು-ಮೈಸೂರು ಹೆದ್ದಾರಿ ಕಳಪೆ ಕಾಮಗಾರಿಯಿಂದಾಗಿ ಇಂತಹ ಅವಘಡಗಳು ನಡೆಯುತ್ತಲೇ ಇರುತ್ತವೆ. ಈ ಮೊದಲು ಹೆದ್ದಾರಿಯಲ್ಲಿ ತುಂಬಾ ಅಪಘಾತಗಳು ನಡೆಯುತ್ತಿದ್ದವು. ಎಡಿಜಿಪಿ ಅಲೋಕ್ ಕುಮಾರ್ ಅವರ ಕಟ್ಟುನಿಟ್ಟಿನ ಕ್ರಮ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಿಂದ ಸ್ವಲ್ಪ ಪ್ರಮಾಣದ ಅಪಘಾತಗಳು ತಪ್ಪಿದಂತಾಗಿದೆ ಎಂದರು.
ಕೇಂದ್ರ ಸರ್ಕಾರ ಮಹಾರಾಷ್ಟ್ರ, ಗುಜರಾತ್‌ನ ಕಂಪನಿಗಳಿಗೆ ಹೆದ್ದಾರಿ ಕಾಮಗಾರಿ ಗುತ್ತಿಗೆ ನೀಡಿದೆ. ಅವರು ಕಳಪೆ ಕಾಮಗಾರಿ ಮಾಡಿ ಓಡಿ ಹೋಗಿದ್ದಾರೆ. ಈಗ ನಮ್ಮ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಮಂಡ್ಯ ರಸ್ತೆ ಕೂಡ ಕಳಪೆಯಿಂದ ಕೂಡಿದೆ. ಒಟ್ಟಾರೆ ಈ ರಸ್ತೆಗೆ ಸಾವಿರಾರು ಕೋಟಿ ಹಣ ಸುರಿದರೂ ಪ್ರಯೋಜನವಾಗಿಲ್ಲ. ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬರುವಾಗ ಸರಿಯಾದ ರೀತಿಯಲ್ಲಿ ನಿರ್ಮಾಣ ಮಾಡಬೇಕಿತ್ತು. ಅದು ಆಗಿಲ್ಲ ಎಂದರು.
ಸಾರಿಗೆ ಬಸ್ ಚಾಲಕರು ಸಹ ನಮ್ಮ ಜೊತೆಗೆ 40-50 ಮಂದಿ ಪ್ರಯಾಣಿಕರಿದ್ದಾರೆ. ಆ ಜೀವಗಳ ಹಾನಿ ತಪ್ಪಿಸಬೇಕು ಎಂಬ ಮನೋಭಾವ ಹೊಂದಬೇಕು. ಬೇಜವಾಬ್ದಾರಿಯಿಂದ ವಾಹನ ಚಾಲನೆ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ: ರವೀಂದ್ರ ಶ್ರೀಕಂಠಯ್ಯ
ಮಂಡ್ಯ: ಮಿಮ್ಸ್‌ಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡರಿಗೆ ಸಾಂತ್ವನ ಹೇಳಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಉಂಟಾಗಿದೆ. ಸಿಬ್ಬಂದಿ ಸರಿಯಾಗಿ ಇಲ್ಲ. ಗಾಯಾಳುಗಳಿಗೆ ಸೂಕ್ತ ಕಾಲದಲ್ಲೇ ಸೂಕ್ತ ಚಿಕಿತ್ಸೆ ಅಗತ್ಯವಿದೆ ಎಂದರು.
ಆಸ್ಪತ್ರೆಯಲ್ಲಿ ರೋಗಿಗಳು, ಸಂಬಂಧಿಕರು ಸಿಟಿ ಸ್ಕ್ಯಾನ್ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ. ಆಸ್ಪತ್ರೆಗೆ ನಿತ್ಯ ಸಾವಿರಾರು ಜನರು ಬರುತ್ತಾರೆ. ಅವರಿಗೆ ಸೂಕ್ತ ಚಿಕಿತ್ಸೆ ಅಗತ್ಯವಿದೆ. ಜನರೇಟರ್ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಆಸ್ಪತ್ರೆಯಲ್ಲಿ ಸೌಲಭ್ಯ ಕೊರತೆ ಇದ್ದರೂ ಗಮನ ಹರಿಸದಿರುವುದು ಬೇಸರ ತರಿಸಿದೆ ಎಂದು ಕಿಡಿಕಾರಿದರು.
ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಹೇಳಿದರೂ ಸಂಕಷ್ಟದಲ್ಲಿರುವ ರೋಗಿಗಳಿಗೆ ತಕ್ಷಣ ಆರೋಗ್ಯ ಸೇವೆ ನೀಡಬೇಕು. ಬಡ ಮತ್ತು ಮಧ್ಯಮ ರೋಗಿಗಳು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾ ಸಚಿವ ಚಲುವರಾಯಸ್ವಾಮಿ ಅವರು ಕೇವಲ ರಾಜಕೀಯ ಮಾತುಗಳನ್ನಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಆದರೆ, ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಶಾಸಕ ಕೆ. ಸುರೇಶ್‌ಗೌಡ ಇದ್ದರು.