ತನ್ನ ಸ್ನೇಹಿತೆ ಮನೆಗೆ ಬಂದಿದ್ದ ಗುಜರಿ ವ್ಯಾಪಾರಿಯೊಬ್ಬನನ್ನು ಆಕೆಯ ಪತಿ ಹಾಗೂ ಸಂಬಂಧಿಕರು ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬ್ಯಾಟರಾಟನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು : ತನ್ನ ಸ್ನೇಹಿತೆ ಮನೆಗೆ ಬಂದಿದ್ದ ಗುಜರಿ ವ್ಯಾಪಾರಿಯೊಬ್ಬನನ್ನು ಆಕೆಯ ಪತಿ ಹಾಗೂ ಸಂಬಂಧಿಕರು ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬ್ಯಾಟರಾಟನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೊಹಮ್ಮದ್ ಕಾಸಿಫ್ (27) ಕೊಲೆಯಾದ ದುರ್ದೈವಿ
ರಾಮನಗರದ ಬೀಡಿ ಕಾಲೋನಿಯ ನಿವಾಸಿ ಮೊಹಮ್ಮದ್ ಕಾಸಿಫ್ (27) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತೆ ಪತಿ ಅಕ್ಬರ್ ಹಾಗೂ ಆತನ ಸಂಬಂಧಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 2 ದಿನಗಳ ಹಿಂದೆ ಬಾಪೂಜಿನಗರದಲ್ಲಿರುವ ಗೆಳತಿ ಮನೆಗೆ ಮೊಹಮ್ಮದ್ ಬಂದಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರದಲ್ಲಿ ಗುಜರಿ ವ್ಯವಹಾರ ನಡೆಸಿಕೊಂಡು ಮೊಹಮ್ಮದ್, ತಮ್ಮ ಕುಟುಂಬದ ಜತೆ ಅಲ್ಲೇ ನೆಲೆಸಿದ್ದ. ಈ ಮೊದಲು ಬಾಪೂಜಿನಗರವು ಆತನ ನೆಲೆವೀಡಾಗಿತ್ತು. ಪ್ರೌಢಶಾಲೆಯಲ್ಲಿ ಓದುವಾಗ ಮೊಹಮ್ಮದ್‌ಗೆ ಅಕ್ಬರ್ ಪತ್ನಿ ಪರಿಚಯವಾಗಿತ್ತು. ಈತ 10ನೇ ತರಗತಿ ಹಾಗೂ ಆಕೆ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹೀಗಿದ್ದರೂ ಇಬ್ಬರ ಮಧ್ಯೆ ಗೆಳೆತನ ಬೆಳೆದು ಆತ್ಮೀಯ ಒಡನಾಟ ಇತ್ತು. ಮದುವೆ ಬಳಿಕವು ಈ ಸ್ನೇಹವೂ ಮುಂದುವರೆದಿತ್ತು. ಆದರೆ ಈ ಸ್ನೇಹಕ್ಕೆ ಅಕ್ಬರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಹೀಗಿದ್ದರೂ ಗೆಳತನ ಜತೆ ಆತನ ಪತ್ನಿ ಸಂಪರ್ಕ ಅಭಾದಿತವಾಗಿತ್ತು ಎಂದು ತಿಳಿದು ಬಂದಿದೆ.
ಅಂತೆಯೇ ತನ್ನ ಸ್ನೇಹಿತೆಯನ್ನು ಕಾಣಲು ಬಾಪೂಜಿನಗರದಲ್ಲಿದ್ದ ಆಕೆಯ ಮನೆಗೆ ಸೋಮವಾರ ಸಂಜೆ ಮೊಹಮ್ಮದ್ ಬಂದಿದ್ದ. ಅದೇ ವೇಳೆ ಮನೆಗೆ ಬಂದ ಅಕ್ಬರ್‌ಗೆ ಮೊಹಮ್ಮದ್ ಕಂಡು ನಖಶಿಖಾಂತ ಉರಿದು ಹೋಗಿದೆ. ನೀನ್ಯಾಕೆ ಮನೆಗೆ ಬಂದೆ ಎಂದು ಪ್ರಶ್ನಿಸಿ ಏಕಾಏಕಿ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ ಆತನ ಸಂಬಂಧಿಕರು ಬಂದು ಗಲಾಟೆಯಲ್ಲಿ ಕೈ ಜೋಡಿಸಿದ್ದಾರೆ. ಮನಬಂದಂತೆ ಹೊಡೆದು ಮೊಹಮ್ಮದ್‌ನನ್ನು ಆರೋಪಿಗಳು ಕಳುಹಿಸಿದ್ದಾರೆ. ಈ ಹಲ್ಲೆಯಿಂದ ಮೃತನ ದೇಹವು ಮೈ ಎಲ್ಲ ಹಣ್ಣುಗಾಯಿ ಆಗಿತ್ತು.

