ಸಾರಾಂಶ
ಸಹ ಪಾಠಿಗಳೊಂದಿಗೆ ನೀರಿನ ಕಟ್ಟೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ನವಿಲೇ ಗ್ರಾಮದಲ್ಲಿ ಸೋಮವಾರ ಜರುಗಿದೆ.
ಮದ್ದೂರು : ಸಹ ಪಾಠಿಗಳೊಂದಿಗೆ ನೀರಿನ ಕಟ್ಟೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ನವಿಲೇ ಗ್ರಾಮದಲ್ಲಿ ಸೋಮವಾರ ಜರುಗಿದೆ.
ಗ್ರಾಮದ ಶ್ರೀನಿವಾಸ್ ಪುತ್ರ ಪ್ರಜ್ವಲ್ (14) ಮೃತಪಟ್ಟ ವಿದ್ಯಾರ್ಥಿ. ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಶಾಲೆಗೆ ರಜೆ ಇದ್ದ ಕಾರಣ ತನ್ನ ನಾಲ್ಕು ಮಂದಿ ಸಹ ಪಾಠಿಗಳೊಂದಿಗೆ ಗ್ರಾಮದಲ್ಲಿನ ಸುಮಾರು 200 ರಿಂದ 300 ಅಡಿ ಆಳವಿರುವ ನೀರಿನ ಕಟ್ಟೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಈಜಲು ಹೋಗಿದ್ದಾನೆ. ಕಟ್ಟೆಯಲ್ಲಿ ಹೂಳು ತುಂಬಿದ ಕಾರಣ ಹೂಳಿನಲ್ಲಿ ಸಿಲುಕಿ ಪ್ರಜ್ವಲ್ ಹೊರಬರಲಾರದೆ ಕೊನೆಯುಸಿರದಿದ್ದಾನೆ.
ಈತನೊಂದಿದ್ದ ನಾಲ್ವರು ಸಹಪಾಠಿಗಳು ಹೆದರಿ ಸ್ಥಳದಿಂದ ಪರಾರಿಯಾದ ನಂತರ ಪೋಷಕರಿಗೆ ಮತ್ತು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ನಂತರ ಗ್ರಾಮಸ್ಥರು ಪೊಲೀಸರ ಮೂಲಕ ಮದ್ದೂರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಎಂ.ಆರ್.ಶಿವಾನಂದ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ಅಧಿಕಾರಿ ವಿಜಯಕುಮಾರ್, ಸಿಬ್ಬಂದಿ ರಾಜ್ ತೇಲ್ ಸಂಗ್, ಉತ್ತಮ್ ಮಾರುತಿ ಬಗಾಯಿ, ಸತ್ಯಪ್ಪ ಅವರ ತಂಡ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ನೀರಿನ ಹೂಳಿನಲ್ಲಿ ಸಿಲುಕಿದ್ದ ಪ್ರಜ್ವಲ್ ಶವವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಕೆಸ್ತೂರು ಪೊಲೀಸರು ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.