ಸಾರಾಂಶ
ನಿಯಂತ್ರಣ ತಪ್ಪಿ ರಸ್ತೆ ಬಿದ್ದ ದ್ವಿಚಕ್ರ ವಾಹನ ಸವಾರನ ತಲೆ ಮೇಲೆ ವಾಟರ್ ಟ್ಯಾಂಕರ್ ವಾಹನದ ಚಕ್ರ ಉರುಳಿ ಮೃತಪಟ್ಟಿರುದು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಿಯಂತ್ರಣ ತಪ್ಪಿ ರಸ್ತೆ ಬಿದ್ದ ದ್ವಿಚಕ್ರ ವಾಹನ ಸವಾರನ ತಲೆ ಮೇಲೆ ವಾಟರ್ ಟ್ಯಾಂಕರ್ ವಾಹನದ ಚಕ್ರ ಉರುಳಿ ಮೃತಪಟ್ಟಿರುವ ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪುಟ್ಟೇನಹಳ್ಳಿ ನಿವಾಸಿ ಕಿರಣ್(19) ಮೃತ ದುರ್ದೈವಿ. ಕೊತ್ತನೂರು ದಿಣ್ಣೆ ಮುಖ್ಯರಸ್ತೆಯ ಆರ್‌ಬಿಐ ಲೇಔಟ್‌ನಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 9 ಗಂಟೆಗೆ ಈ ದುರ್ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಕಿರಣ್, ಆರ್‌ಬಿಐ ಲೇಔಟ್‌ನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ರೇಷನ್ ಅಂಗಡಿಗೆ ತೆರಳಿ ಬೇಕರಿಗೆ ವಾಪಾಸ್ ಆಗುತ್ತಿದ್ದ. ಈ ವೇಳೆ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾನೆ. ಇದೇ ಸಮಯಕ್ಕೆ ಹಿಂದಿನಿಂದ ಬರುತ್ತಿದ್ದ ವಾಟರ್ ಟ್ಯಾಂಕರ್ ವಾಹನದ ಹಿಂಬದಿಯ ಎಡ ಚಕ್ರಗಳು ಕಿರಣ್ ತಲೆ ಮೇಲೆ ಉರುಳಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಘಟನೆಯಲ್ಲಿ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ಮಾಡಿಸಿ ಕಿರಣ್ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಘಟನೆ ಸಂಬಂಧ ವಾಟರ್ ಟ್ಯಾಂಕರ್ ವಾಹನ ಜಪ್ತಿ ಮಾಡಿದ್ದು, ಅದರ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.