ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಆ್ಯಪ್ ಆಧಾರಿತ ಕಂಪನಿಗಳ ಆಹಾರ ಪೂರೈಕೆದಾರರನ್ನು (ಫುಡ್ ಡೆಲಿವರಿ) ಗುರಿಯಾಗಿಸಿಕೊಂಡು ಮೊಬೈಲ್ ದೋಚುತ್ತಿದ್ದ ಕಿಡಿಗೇಡಿಯೊಬ್ಬನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೊಡಿಗೇಹಳ್ಳಿ ನಿವಾಸಿ ಮೊಹಮ್ಮದ್ ಪರ್ದಿನ್ ಅಲಿಯಾಸ್ ಸಲ್ಮಾನ್ ಬಂಧಿತನಾಗಿದ್ದು, ಆರೋಪಿಯಿಂದ ವಿವಿಧ ಕಂಪನಿಯ 80 ಮೊಬೈಲ್‌ಗಳು ಹಾಗೂ ಬೈಕ್ ಸೇರಿದಂತೆ 20 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಘೋರಿಪಾಳ್ಯದ ಮುಸ್ತಾಕ್‌ಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೆಲ ದಿನಗಳ ಹಿಂದೆ ಹೂಡಿ ಸಮೀಪ ಫುಡ್ ಡೆಲಿವರಿ ಹುಡುಗನಿಂದ ಮೊಬೈಲ್ ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣದ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.ಸಲ್ಮಾನ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ಯಶವಂತಪುರ, ಆರ್.ಆರ್.ನಗರ ಹಾಗೂ ಮಹದೇವಪುರ ಸೇರಿದಂತೆ ವಿವಿಧ ಠಾಣೆಗಳಲ್ಲಿ 19ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಮೊಬೈಲ್ ಕಳ್ಳತನಕ್ಕೆ ಸಲ್ಮಾನ್ ಕುಖ್ಯಾತಿ ಪಡೆದಿದ್ದ. ರಾತ್ರಿ ಗ್ರಾಹಕರಿಗೆ ಊಟ ಪೂರೈಸುವ ಫುಡ್ ಡೆಲಿವರಿ ಹುಡುಗರನ್ನೇ ಗುರಿಯಾಗಿಸಿಕೊಂಡು ಆತ ಕೃತ್ಯ ಎಸಗುತ್ತಿದ್ದ. ಬೈಕ್‌ನ ಹ್ಯಾಂಡಲ್ ಬಳಿ ಮೊಬೈಲ್ ಸಿಕ್ಕಿಸಿಕೊಂಡು ವಾಹನ ಚಲಾಯಿಸುವುದಾಗ ದಿಢೀರನೇ ಮೊಬೈಲ್ ದೋಚಿ ಆರೋಪಿ ಪರಾರಿಯಾಗುತ್ತಿದ್ದ. ಇದೇ ರೀತಿ ಕೆಲ ದಿನಗಳ ಹಿಂದೆ ಹೂಡಿ ಸಮೀಪ ಸಹ ಸಲ್ಮಾನ್ ಮೊಬೈಲ್ ಕಳವು ಮಾಡಿ ಕೊನೆಗೆ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.